ಶಿವಮೊಗ್ಗ): CWRC (ಕಾವೇರಿ ನೀರು ನಿಯಂತ್ರಣ ಸಮಿತಿ) ಆದೇಶದಂತೆ ತಮಿಳುನಾಡಿಗೆ 4 ಟಿ.ಎಮ್.ಸಿ ನೀರು ಹರಿಸಬೇಕೆಂಬ ಆದೇಶವು ಸಂಪೂರ್ಣ ರೈತ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ನಗರದ ಅಶೋಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, “ಈಗಾಗಲೇ ನಮ್ಮ ರಾಜ್ಯದ ಜಲಾಶಯಗಳಲ್ಲಿ ಕನಿಷ್ಠ ಮಟ್ಟದ ನೀರಿದ್ದು, ಭೀಕರ ಬರದ ಛಾಯೆ ಆವರಿಸಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ಚಾನಲ್‌ಗಳಿಗೆ ಸರಿಯಾಗಿ ನೀರು ಹರಿಯದೆ ಸುಮಾರು 168 ಹಳ್ಳಿಗಳು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳು ಸಂಪೂರ್ಣವಾಗಿ ಬರದಿಂದ ತತ್ತರಿಸಿರುವಾಗ, ತಮಿಳುನಾಡಿಗೆ ನೀರು ಹರಿಸುವುದು ಕನ್ನಡಿಗರಿಗೆ ಹಾಗೂ ನಮ್ಮ ರೈತರಿಗೆ ಎಸಗುವ ಮಹಾದ್ರೋಹ,” ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
“ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತಮಿಳುನಾಡಿಗೆ ಹರಿಯುವ ನೀರನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಒಂದು ವೇಳೆ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು,” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಈ ಧರಣಿ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೆಚ್.ಎಸ್., ಜಿಲ್ಲಾ ಸಂಚಾಲಕರಾದ ಶಿವಕುಮಾರ್, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಏ ಸೇರಿದಂತೆಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

