ಶಿವಮೊಗ್ಗ. ಕಸ್ತೂ ರಿ ರಂಗನ್ ವರದಿಗೆ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. 7 ನೇ ಬಾರಿಗೆ ಈ ವರದಿ ವಿಚಾರವಾಗಿ ಹೊರಡಿಸಲಾಗಿರುವ ನೋಟಿಫಿಕೇಷನ್ ತಿರಸ್ಕರಿಸುವ ಸಲುವಾಗಿ ವಿಶೇಷ ಅಧಿವೇಶನ ಕರೆಯಲಾಗಿದೆ. ಇದರ ಬೆನ್ನಲ್ಲೇ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಸಿಎಂ ಸಮಾವೇಶ ನಡೆಸಿದ್ದು, ಇಲ್ಲಿನ ಜನರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಮಗೆ ಈ ವರದಿ ಬೇಡವೇ ಬೇಡ ಎಂಬ ಕೂಗು ಈ ಸಮಾವೇಶದ ಮೂಲಕ ಬಲವಾಗಿ ಕೇಳಿ ಬಂದಿದೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಭೇಟಿ ನೀಡಿದ್ದಾರೆ. ಕಸ್ತೂರಿರಂಗನ್ ವರದಿ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಸಮಾವೇಶದಲ್ಲಿ ಚರ್ಚೆ ನಡೆಸಿದ್ದಾರೆ. ತೀರ್ಥಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾದ ಸಮಾವೇಶವನ್ನ ಸಿಎಂ ಶಿವಕುಮಾರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ್ರು. ಬಳಿಕ ಸಂವಾದ ಕಾರ್ಯಕ್ರಮ ನಡೆಸಿದ ಸಿಎಂ, ಜನರ ಬಳಿ ತೆರಳಿ ಸಂವಾದ ನಡೆಸಿದರೆ, ಪೂರ್ಣ ಪ್ರಮಾಣದಲ್ಲಿ ನ್ಯಾಯ ನೀಡಲು ಸಾಧ್ಯ ರೈತರ ಪರವಾಗಿ ನಾನು ಸದಾ ಇದ್ದೆನೆ ಅಂತಾ ಹೇಳಿದ್ರು.
ಪಾರಂಪರಿಕವಾಗಿ ಇರುವ ಜನರಿಗೆ ತೊಂದರೆ ಕೊಡಬೇಡಿ. ನಿಮ್ಮ ಕಾಡು, ನೀವು ರಕ್ಷಿಸಿಕೊಳ್ಳಿ ಅಂತಾ ಹೇಳಿದ್ರು. ರೈತರ ಬಗ್ಗೆ ನಾನು ಕಾಳಜಿ ವಹಿಸಿದ್ದು, ಮಲೆನಾಡಿನ ಸಮಸ್ಯೆಗಳ ಬಗ್ಗೆ ದೆಹಲಿಗೆ ಹೋಗೋಣ ಚರ್ಚೆ ನಡೆಸೋಣ. ಸಂಸದ ರಾಘವೇಂದ್ರರಿಗೂ ಕರೆದುಕೊಂಡು ಹೋಗಿ ಚರ್ಚಿಸೋಣ. ಅದಕ್ಕೂ ಮೊದಲು ಸೋಮವಾರ ಅಧಿವೇಶನದಲ್ಲಿ ಚರ್ಚೆ ನಡೆಸೋಣ ಅಂತಾ ಡಿಕೆಶಿ ಹೇಳಿದ್ದು, ಸ್ಥಳಿಯರಿಗೆ ಸಮಾಧಾನ ತಂದಂತಾಯ್ತು. ಈ ವೇಳೆ ಅರಣ್ಯಾಧಿಕಾರಿಗಳಿಗೆ ವೇದಿಕೆಯಲ್ಲೇ ಸೂಚನೆ ನೀಡಿದ ಸಿಎಂ, ಯಾರಿಗೂ ಕೂಡ ಹೊಸದಾಗಿ ನೋಟೀಸ್ ನೀಡಬೇಡಿ ಎಂದು ತಾಕೀತು ಮಾಡಿದ್ರು. ಪರಿಸರ ಉಳಿಯಬೇಕು. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ರು. ದೇವರು ಕೊಟ್ಟ ಅವಕಾಶದಲ್ಲಿ, ರೈತರಿಗೆ, ನಾಡಿನ ಜನರ ಪರವಾಗಿ ನಾನು ನಿಂತಿದ್ದೆನೆ ಎಂದು ಹೇಳಿದ್ರು. ಎರಡೂ ಸರ್ಕಾರ ಸೇರಿ ಜನರನ್ನು ಉಳಿಸುವ ಕೆಲಸ ಮಾಡೋಣ ಎಂದು ಸಿಎಂ ಕರೆ ನೀಡಿದ್ರು.
ಇನ್ನೂ ತೀರ್ಥಹಳ್ಳಿ ತಾಲೂಕಿನ ಅತಿ ಹೆಚ್ಚು ಗ್ರಾಮ ಕಸ್ತೂರಿ ರಂಗನ್ ವರದಿಯಲ್ಲಿ ಸೇರ್ಪಡೆಯಾಗಿರುವುದರಿಂದ ಈ ಸಭೆ ಬಹಳ ಮಹತ್ವ ಪಡೆದಿತ್ತು. ಅದರಂತೆ ಸಭೆಯಲ್ಲಿ ಒಕ್ಕೊರಲಿನಿಂದ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲಾಯಿತಾದರೂ, ಜನಪ್ರತಿನಿಧಿಗಳ ಭಾಷಣಗಳು ವ್ಯತಿರಿಕ್ತ ಹೇಳಿಕೆಗಳು ಸಮಾವೇಶದ ಹೈಲೇಟ್ಸ್ ಆದವು. ಇತ್ತ ಕೇಂದ್ರ ಸರ್ಕಾರಕ್ಕೆ ದೂಷಿಸುವ ಬದಲು, ಗ್ರೀನ್ ಟ್ರಿಬ್ಯುನಲ್ ಹಾಗೂ ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ನೀವು ವಿರೋಧಿಸಿ ಎಂಬ ಸಂಸದ ರಾಘವೇಂದ್ರ ಹೇಳಿಕೆಗೆ ವ್ಯತಿರಿಕ್ತ ಪ್ರತಿಕ್ರಿಯೆಗಳು ವ್ಯಕ್ತವಾದವು. ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಸಚಿವ ಮಧು ಬಂಗಾರಪ್ಪ, ಪರೋಕ್ಷವಾಗಿ ಸಂಸದ ರಾಘವೇಂದ್ರರಿಗೆ ಟಾರ್ಗೆಟ್ ಮಾಡಿ ಮಾತನಾಡಿದ್ರು. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ನಾವು ಕೂಡ ದನಿ ಎತ್ತಿದ್ದೆವೆಂದು ಸಂಸದ ರಾಘವೇಂದ್ರ ವೇದಿಕೆ ಭಾಷಣದಲ್ಲಿ ಹೇಳಿದ್ರೂ ಕೂಡ, ಅದಕ್ಕೆ ವಿರೋಧಿಸಿ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಭಾಷಣದ ಮೂಲಕ ತಿರುಗೇಟು ಕೊಟ್ರು.
ಅದರಂತೆ, ಸಮಾವೇಶ ಆರಂಭದಲ್ಲೇ ವಂದೇ ಮಾತರಂ ಗೀತೆ ಬಗ್ಗೆ ಮತ್ತೆ ಗೊಂದಲ ಏರ್ಪಟಿತ್ತು. ರಾಜ್ಯ ಸರ್ಕಾರದ ಆದೇಶದಂತೆ, ಎರಡು ಚರಣ ಮಾತ್ರ ಹಾಡಲಾಯಿತಾದರೂ, ಇದಕ್ಕೆ ಶಾಸಕ ಚನ್ನಬಸಪ್ಪ ಆಕ್ರೋಶ ಹೊರ ಹಾಕಿದ್ರು. ವೇದಿಕೆಯಲ್ಲೇ ಮೈಕ್ ಪಡೆದು ಸಿಎಂ ಗೆ ವಂದೇ ಮಾತರಂ ಪೂರ್ಣ ಗೀತೆ ಹಾಡಲು ಆದೇಶಿಸಿ ಅಂತಾ ಆಗ್ರಹಿಸಿದ್ರು. ಈ ವೇಳೆ ಸಭೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ಘೋಷಣೆ ಕೂಗುವ ಮೂಲಕ ಶಾಸಕ ಚನ್ನಬಸಪ್ಪ ಮನವಿಗೆ ವಿರೋಧಿಸಿದ್ರು. ಈ ವೇಳೆ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಒಟ್ಟಾರೆ, ಕಸ್ತೂರಿ ರಂಗನ್ ವರದಿಯಲ್ಲಿ ಮಲೆನಾಡು ಭಾಗದ ಸಮಸ್ಯೆಯೂ ಕೂಡ ಅಡಕವಾಗಿದೆ. ಬಾಧಿತ ಪ್ರದೇಶಗಳಲ್ಲಿ ಮಲೆನಾಡು ಕೂಡ ಸೇರ್ಪಡೆಯಾಗಿದ್ದು, ಈ ಬಗ್ಗೆ ಸೋಮವಾರದಿಂದ ಆರಂಭವಾಗುವ ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಸಮಾವೇಶ, ಸಿಎಂ ಭೇಟಿ ಮಹತ್ವ ಪಡೆದಿದೆ.

