340
ಶಿವಮೊಗ್ಗ: ತಾಲೂಕಿನ ಆಯನೂರು ಸಮೀಪದ ವೀರಗಾರನ ಬೈರನಕೊಪ್ಪ ಬಳಿ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ನಗರದ ಗಾಡಿಕೊಪ್ಪ ನಿವಾಸಿ, ಖಾಸಗಿ ಬಸ್ ಚಾಲಕ ವಿರೇಶ್ (28) ಮೃತಪಟ್ಟ ದುರ್ದೈವಿ.
ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ (NH-206) ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವಿರೇಶ್ ಅವರಿಗೆ ಅಪರಿಚಿತ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ರಭಸಕ್ಕೆ ತಲೆಗೆ ತೀವ್ರ ಗಾಯಗೊಂಡಿದ್ದ ವಿರೇಶ್, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಬಳಿಕ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

