Home Uncategorized ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ನಿವೃತ್ತ ಇಂಜಿನಿಯರ್ ದುರಂತ ಸಾವು

ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ನಿವೃತ್ತ ಇಂಜಿನಿಯರ್ ದುರಂತ ಸಾವು

by Mahesh malenaadu

​ಶಿವಮೊಗ್ಗ : ನಗರದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ 80 ವರ್ಷದ ವೃದ್ಧರೊಬ್ಬರು ಸಾವನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

​ವಿನೋಬನಗರದ ಶಿವಪ್ಪನಾಯಕ ಬಡಾವಣೆಯ ನಿವಾಸಿ, ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ (80) ಮೃತ ದುರ್ದೈವಿ.
ಇಂದು ಬೆಳಿಗ್ಗೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಮನೆಗೆ ಬಂದಿದ್ದ ಕುಮಾರಸ್ವಾಮಿ ಅವರು, ಬೆಳಿಗ್ಗೆ ಸುಮಾರು 7:30 ರ ವೇಳೆಗೆ ದತ್ತಾತ್ರೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟಿದ್ದರು. ಆದರೆ, ಬೆಳಿಗ್ಗೆ ಸುಮಾರು 9:00 ಗಂಟೆಯ ವೇಳೆಗೆ ಸಂತೋಷ್ ಕುಮಾರ್ ಎಂಬುವವರು ವೃದ್ಧರ ಮನೆಗೆ ಬಂದು, ಕುಮಾರಸ್ವಾಮಿ ಅವರು ದೇವಸ್ಥಾನದ ಲಿಫ್ಟ್ ಬಾಗಿಲ ಹತ್ತಿರ ಸಿಲುಕಿಕೊಂಡು ಅಸ್ವಸ್ಥಗೊಂಡಿರುವುದಾಗಿ ತಿಳಿಸಿದ್ದಾರೆ.
​ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಲಿಫ್ಟ್‌ನಲ್ಲಿ ಸಿಲುಕಿದ್ದ ಕುಮಾರಸ್ವಾಮಿ ಅವರನ್ನು ಹೊರತೆಗೆದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಕುಮಾರಸ್ವಾಮಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
​ಕುಮಾರಸ್ವಾಮಿ ಅವರು ದೇವಸ್ಥಾನದ ಲಿಫ್ಟ್‌ನಲ್ಲಿ ಮೇಲೆ ಹೋಗಲು ಬಟನ್ ಒತ್ತಿ, ಹೊರಗಿನ ಬಾಗಿಲು ತೆಗೆದು ಒಳಹೋದಾಗ, ಮೇಲಿದ್ದ ಲಿಫ್ಟ್ ಕೆಳಗೆ ಬಂದಿದ್ದರಿಂದ ಅವರು ಲಿಫ್ಟ್‌ನ ಅಡಿ ಸಿಲುಕಿಕೊಂಡು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
​ಈ ಕುರಿತು ಮೃತರ ಪತ್ನಿ ಲಲಿತಾ ಕುಮಾರಸ್ವಾಮಿ (75) ಅವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದೆ.

Spread the love

You may also like

Leave a Comment