117
ಶಿವಮೊಗ್ಗ: 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಗಾಜನೂರಿನ ತುಂಗಾ ಜಲಾಶಯವು ತ್ರಿವರ್ಣ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಎಲ್‌ಇಡಿ ದೀಪಾಲಂಕಾರದಿಂದ ಅಣೆಕಟ್ಟು ಭವ್ಯವಾಗಿ ಮೈದಳೆದಿದೆ.
ರಾತ್ರಿ ವೇಳೆಯಲ್ಲಿ ಜಲಾಶಯದ ನೀರಿನ ಮೇಲೆಯೇ ತ್ರಿವರ್ಣದ ಕಾಂತಿ ಬಿಂಬಿತವಾಗಿದ್ದು, ಕತ್ತಲಿನಲ್ಲಿ ಮಲೆನಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ನಯನಮನೋಹರ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಜಲಾಶಯದ ಬಳಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಜನರು ಅತ್ಯಾಕರ್ಷಕ ದೀಪಾಲಂಕಾರದ ಸೌಂದರ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಹಾಗೂ ವೀಡಿಯೋಗಳ ಮೂಲಕ ಸೆರೆಹಿಡಿದು ಸಂಭ್ರಮಿಸಿದರು.

