Home ರಾಷ್ಟ್ರೀಯ ರೈಲ್ವೆ ಮೈಸೂರು ವಿಭಾಗದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಹಾಗೂ ಗೌರವ ವಂದನೆ

ರೈಲ್ವೆ ಮೈಸೂರು ವಿಭಾಗದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಹಾಗೂ ಗೌರವ ವಂದನೆ

by Mahesh malenaadu

ಮೈಸೂರು:

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ ವತಿಯಿಂದ 2026ರ ಅಕ್ಟೋಬರ್ 21ರಂದು ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು/ಆರ್ ಪಿಎಫ್ ಅವರ ಕಚೇರಿಯಲ್ಲಿ ಗೌರವಪೂರ್ಣ ಪಥಸಂಚಲನದೊಂದಿಗೆ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. 1959ರಲ್ಲಿ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಸಂಘರ್ಷದಲ್ಲಿ ಹುತಾತ್ಮರಾದ ಹತ್ತು ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ.

ಈ ವರ್ಷದ ಆಚರಣೆಯಲ್ಲಿ 2025ರ ಸೆಪ್ಟೆಂಬರ್ 1ರಿಂದ 2026ರ ಆಗಸ್ಟ್ 31ರವರೆಗಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಎಂಟು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು. ಪಥಸಂಚಲನದ ನೇತೃತ್ವವನ್ನು ಆರ್ ಪಿಎಫ್ ಇನ್ಸ್‌ಪೆಕ್ಟರ್ ಶ್ರೀ ಎಂ. ಜಿ. ರಂಗನಾಥ ಅವರು ವಹಿಸಿದ್ದರು. 12 ಆರ್ ಪಿಎಫ್ ಸಿಬ್ಬಂದಿಯನ್ನು ಒಳಗೊಂಡ ಗೌರವ ವಂದನೆ ಪಡೆಯು ಪಥಸಂಚಲನದಲ್ಲಿ ಭಾಗವಹಿಸಿದರು.

ಮೈಸೂರು ವಿಭಾಗದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರಾದ ಶ್ರೀ ಸ್ಯಾಮ್ ಪ್ರಶಾಂತ್ ಜೆ. ಆರ್. ಅವರು ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ಹುತಾತ್ಮರಾದ ಸಿಬ್ಬಂದಿಯ ಹೆಸರುಗಳನ್ನು ಓದಿ ಗೌರವಿಸಲಾಯಿತು. ಗೌರವ ವಂದನೆ ಪಡೆಯು ಶಸ್ತ್ರಾಸ್ತ್ರಗಳನ್ನು ಎತ್ತಿ ಗೌರವ ಸಲ್ಲಿಸಿತು. ಬಳಿಕ ಹುತಾತ್ಮ ಸಿಬ್ಬಂದಿಯ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಜೀಮ್‌ಗಂಜ್, ಪೂರ್ವ ರೈಲ್ವೆಯ ಇನ್ಸ್‌ಪೆಕ್ಟರ್ ಓಂ ಪ್ರಕಾಶ್ ಮೀನಾ; ಗೋಮೊ, ಪೂರ್ವ ಮಧ್ಯ ರೈಲ್ವೆಯ ಹೆಡ್ ಕಾನ್ಸ್ಟೇಬಲ್ ಗಳು ಶ್ರೀಪತಿ ಬಸುಕಿ; ರಾಯಗಢ, ದಕ್ಷಿಣ ಪೂರ್ವ ಮಧ್ಯ ರೈಲ್ವೆಯ ಪ್ರೇಮ್ ಕಿಶೋರ್ ಮಿಶ್ರಾ; ಪನಗಢ, ಪೂರ್ವ ರೈಲ್ವೆಯ ಅರುಣ್ ಕುಮಾರ್ ಸಿಂಗ್; ಪೆಂಡ್ರೋ ರಸ್ತೆ, ದಕ್ಷಿಣ ಪೂರ್ವ ಮಧ್ಯ ರೈಲ್ವೆಯ ಕಾನ್ಸ್ಟೇಬಲ್ ಗಳು ರಾಮ್ ಅಸರಾಯ್ ಸರೋಜ್; ಹಾರ್ಮುತಿ, ಈಶಾನ್ಯ ಗಡಿ ರೈಲ್ವೆಯ ಅಶೋಕ್ ಕುಮಾರ್ ಲೀಲ್; ಕಹಲ್‌ಗಾಂವ್, ಪೂರ್ವ ರೈಲ್ವೆಯ ಧರ್ಮೇಂದ್ರ ಕುಮಾರ್ ಹಾಗೂ ಹರ್ದಾ, ಪಶ್ಚಿಮ ಮಧ್ಯ ರೈಲ್ವೆಯ ಲೋಕೇಶ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರಾದ ಶ್ರೀ ಸ್ಯಾಮ್ ಪ್ರಶಾಂತ್ ಜೆ. ಆರ್. ಅವರು, ಹುತಾತ್ಮ ಸಿಬ್ಬಂದಿಯ ತ್ಯಾಗ ಮತ್ತು ಬಲಿದಾನವು ರೈಲ್ವೆ ರಕ್ಷಣಾ ಪಡೆಯ ಎಲ್ಲ ಸಿಬ್ಬಂದಿಗೂ ಸದಾ ಸ್ಫೂರ್ತಿಯಾಗಿರುತ್ತದೆ ಎಂದು ಹೇಳಿದರು. ರೈಲ್ವೆ ಪ್ರಯಾಣಿಕರ ಸುರಕ್ಷತೆ ಹಾಗೂ ರೈಲ್ವೆ ಆಸ್ತಿಯ ರಕ್ಷಣೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಯು ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಸಹಾಯಕ ಭದ್ರತಾ ಆಯುಕ್ತರು, ಇನ್ಸ್‌ಪೆಕ್ಟರ್‌ಗಳು ಹಾಗೂ ಇತರ ಆರ್ ಪಿಎಫ್ ಸಿಬ್ಬಂದಿ ಭಾಗವಹಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಗಿರೀಶ ಧರ್ಮರಾಜ ಕಲಗೊಂಡ
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ
ಸಾರ್ವಜನಿಕ ಸಂಪರ್ಕ ಅಧಿಕಾರಿ
ಮೈಸೂರು ವಿಭಾಗ

Spread the love

You may also like

Leave a Comment