ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ಕಿರೀಟ ಪ್ರತಿಷ್ಠಿತ ಶಿವಮೊಗ್ಗ ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ವೈವಿಧ್ಯಮಯವಾಗಿ ಹಾಗೂ ಜನಮನ ತಣಿಸುವ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ. ಜಿಲ್ಲೆಯ ಪಾರಂಪರಿಕ, ಸಾಂಸ್ಕøತಿಕ ಹಾಗೂ ವೈವಿಧ್ಯಮಯ ಪರಂಪರೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅ. 11 ರಂದು ಮಹಾನಗರ ಪಾಲಿಕೆ ಆವರಣದಿಂದ ಶ್ರೀ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಇದೇ ಸಂದರ್ಭದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಟಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ದೇವಿಯ ಮುಖವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಚಾಮುಂಡೇಶ್ವರಿಯ ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ನಟ ಶ್ರೀನಾಥ್ ಅವರು ಆಗಮಿಸಲಿದ್ದಾರೆ. ಅವರ ಉಪಸ್ಥಿತಿಯು ದಸರಾ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಮೆರುಗು ತರಲಿದ್ದು, ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ನಿರೀಕ್ಷೆ ಮೂಡಿಸಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲು ಸಿದ್ಧತೆ ನಡೆದಿದೆ ಎಂದರು. ಚಾಮುಂಡೇಶ್ವರಿ ಮೆರವಣಿಗೆಗೆ ಗಜವೈಭವ ಸಕ್ರೆಬೈಲ್ನ ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಎಂಬ ಮೂರು ಆನೆಗಳು ಚಾಮುಂಡೇಶ್ವರಿಯನ್ನು ಹೊತ್ತು ಸಾಗಲಿದ್ದು, ಮೆರವಣಿಗೆಯು ಮತ್ತಷ್ಟು ಆಕರ್ಷಣೆಯಾಗಲಿದೆ. ಮೂರು ಆನೆಗಳ ಗಜವೈಭವ ದಸರಾ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ವಿವರಿಸಿದ್ದಾರೆ.
ಶಿವಮೊಗ್ಗ ದಸರಾ ಅಂಗವಾಗಿ ಅ.20 ರಂದು ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 5.00 ಗಂಟೆಗೆ ಖ್ಯಾತ ಚಲನಚಿತ್ರ ನಟ ರವಿಚಂದ್ರನ್ ಅವರು ಭಾಗವಹಿಸಲಿದ್ದಾರೆ. ಯುವ ದಸರಾದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ರವಿಚಂದ್ರನ್ ಅವರ ಉಪಸ್ಥಿತಿಯಲ್ಲಿ ಮತ್ತಷ್ಟು ಮೆರುಗು ತರಲಿದೆ. ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಹಾಗೂ ಪಾಲಿಕೆ ಆಯುಕ್ತರಾದ ಮಾಯಣ್ಣ ಸುದ್ದಿಗೋಷ್ಟಿ ತಿಳಿಸಿದ್ದಾರೆ.

