ಶಿವಮೊಗ್ಗ : ಇಲ್ಲಿನ ಗಾಂಧಿ ಬಜಾರ್ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಹಾಗೂ ಶ್ರೀ ಆರ್ಯವೈಶ್ಯ ಭಜನಾ ಮಂಡಳಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆಸಲಾಯಿತು.
ನಂತರ ಭಕ್ತರಿಂದ ಅಖಂಡ ಭಜನೆ ಹಾಗೂ ಲಕ್ಷ ಲಲಿತ ಸಹಸ್ರನಾಮ ಪಾರಾಯಣ ಅಮ್ಮನವರ ಸನ್ನಿಧಿಯಲ್ಲಿ ಪ್ರತ್ಯಕ್ಷವಾಗಿ ಒಂದು ವರ್ಷದ ಅವಧಿಯಲ್ಲಿ ಪಾರಾಯಣ ಮಾಡುವ ಮಹಾ ಸಂಕಲ್ಪವನ್ನು ಮಾತೆಯರು ಶ್ರದ್ಧೆ ಭಕ್ತಿಯಿಂದ ಮಾಡಿದರು.
ಸಂಕಲ್ಪದ ನಂತರ ಮಾತೇಯರೆಲ್ಲರು ಒಂದು ಲಕ್ಷ ಸಹಸ್ರನಾಮ ಪಾರಾಯಣಕ್ಕೆ ನಾಂದಿಯಾಗಿ ಒಂದು ಬಾರಿ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣವನ್ನು ಮಾಡಿದರು. ಬೆಳಿಗ್ಗೆ 9 ರಿಂದ ರಾತ್ರಿ 7ರ ತನಕ ಶಿವಮೊಗ್ಗ ನಗರದ ಭಜನಾ ಪರಷತ್ತಿನ ವಿವಿಧ ಭಜನಾ ಮಂಡಳಿಯ ಮಾತೆಯರು ಅಖಂಡ ಭಜನೆಯನ್ನು ನೆರವೇರಿಸಿಕೊಟ್ಟರು. ಶ್ರೀ ಆರ್ಯವೈಶ್ಯ ಭಜನಾ ಮಂಡಳಿಯಿಂದ ಬಂದಂತಹ ಭಕ್ತರಿಗೆ ಪ್ರಸಾದ ಹಾಗೂ ತಾಂಬೂಲ ನೀಡಲಾಯಿತು.
ಅಖಂಡ ಭಜನೆ ಮುಕ್ತಾಯ ಸಮಾರಂಭ ಹಾಗು ಲಕ್ಷ ಲಲಿತಾ ಸಹಸ್ರನಾಮ ಉದ್ಘಾಟನೆಯನ್ನು ಭಜನಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಬರೀಶ್ ಕಣ್ಣನ್ ಹಾಗೂ ಶ್ರೀ ಆರ್ಯವೈಶ್ಯ ಭಜನಾ ಮಂಡಳಿಯ ಲಕ್ಷ್ಮಿ ಮಹೇಶ್ ನೆರವೇರಿಸಿಕೊಟ್ಟರು.
ವೇದಿಕೆಯಲ್ಲಿ ಭಜನಾ ಮಂಡಳಿಯ ಅಧ್ಯಕ್ಷರಾದ ಸುಷ್ಮಾ ಅರವಿಂದ್ ಹಾಗೂ ಸಂಘದ ಮುಖ್ಯಸ್ಥರಾದ ರಾಧಿಕಾ ಮಾಲತೇಶ್, ಪದ್ಮಶ್ರೀ ಮಂಜುನಾಥ್, ಶ್ವೇತಾ ಸಂದೀಪ್, ಕವಿತಾ ಸಂತೋಷ ಉಪಸ್ಥಿತರಿದ್ದರು.
ಅಖಂಡ ಭಜನೆ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಪಾರಾಯಣಕ್ಕೆ ಶ್ರೀ ಆರ್ಯವೇಶದ ಭಜನಾ ಮಂಡಳಿಯ ಜತೆಗೆ ಆರ್ಯವೈಶ್ಯ ಮಹಾಜನ ಸಮಿತಿ ಹಾಗೂ ಭಜನಾ ಪರಿಷತ್ತಿನ ಮುಖ್ಯಸ್ಥರು ಸಹಕರಿಸಿದರು.

