ಶಿವಮೊಗ್ಗ (ಜುಲೈ 26): ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ನೀಟ್ (NEET) ಪರೀಕ್ಷೆ ಪ್ರಕರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 136ನೇ ‘ಮನ್ ಕಿ ಬಾತ್’ ಕಾರ್ಯಕ್ರಮದ ಕುರಿತು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದ್ದ 136ನೇ ‘ಮನ್ ಕಿ ಬಾತ್’ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅನಿರೀಕ್ಷಿತ: ಸಂಸದ ಬಿ.ವೈ. ರಾಘವೇಂದ್ರ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನಿರ್ಧಾರವನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ ಸಂಸದರು, “ನೀಟ್ ವಿಚಾರದಲ್ಲಿ ಸಿಜೆಪಿ ನೇತೃತ್ವದಲ್ಲಿ ಹೋರಾಟ ನಡೆಯಿತು. ಈ ವೇಳೆ ಬೇರೆ ಶಕ್ತಿಗಳೂ ಕೈಜೋಡಿಸುವ ಕೆಲಸವಾಯಿತು. ಆದರೆ, ಯುವಕರು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಹಾಗೂ ಮಕ್ಕಳನ್ನು ಬಳಸಿ ರಾಜಕೀಯ ಮಾಡುವವರಿಗೆ ವಿದ್ಯಾರ್ಥಿಗಳು ಆಹಾರವಾಗಬಾರದು ಎಂಬ ಸ್ಪಷ್ಟ ಉದ್ದೇಶದಿಂದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ,” ಎಂದು ಸ್ಪಷ್ಟಪಡಿಸಿದರು.
ಮೇ ತಿಂಗಳಿನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಪೇಪರ್ ಲೀಕ್ ಎನ್ನುವುದು ಹಲವು ವರ್ಷಗಳ ಶಾಪವಾಗಿದ್ದು, ಅದನ್ನು ಶಾಶ್ವತವಾಗಿ ತಡೆಯಲು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ ಮತ್ತು ನಮ್ಮ ಸರ್ಕಾರ ಆ ಕೆಲಸವನ್ನು ಮಾಡಲಿದೆ. ಸ್ವತಃ ಜೆ.ಪಿ. ನಡ್ಡಾ ಹಾಗೂ ಸಿಂಗ್ ಅವರು ಈ ಬಗ್ಗೆ ಆಶ್ವಾಸನೆ ನೀಡಿದ್ದಾರೆ ಎಂದರು.
ಅಲ್ಲದೆ, ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, “5 ಬಾರಿ ಸಂಸದರಾಗಿ ಯಶಸ್ವಿಯಾಗಿ ಕೆಲಸ ಮಾಡಿರುವ ಕರ್ನಾಟಕದ ನಾಯಕರಿಗೆ ಈ ಗೌರವ ಸಿಕ್ಕಿರುವುದು ಇಡೀ ರಾಜ್ಯಕ್ಕೆ ಹೆಮ್ಮೆ,” ಎಂದರು.
ಕಾಂಗ್ರೆಸ್ ಸಂಭ್ರಮಾಚರಣೆಗೆ ಟೀಕೆ
ಪ್ರಧಾನ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡೆಸಿದ ಸಂಭ್ರಮಾಚರಣೆಯನ್ನು ಲೇವಡಿ ಮಾಡಿದ ಸಂಸದರು, “ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿತು ಎಂದು ಮೈಸೂರು ಪಾಕ್, ಜಿಲೇಬಿ ಹಂಚಿ ತಿನ್ನುವ ಜನರನ್ನು ನಾವು ನೋಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪಟಾಕಿ ಹೊಡೆಯಲಿ, ಘೋಷಣೆ ಕೂಗಲಿ. ಆದರೆ ಗೌರವಾನ್ವಿತ ಪ್ರಧಾನಿ ಮೋದಿ ಅವರ ಸ್ಪಷ್ಟ ಉದ್ದೇಶ ಮತ್ತು ನಿಯತ್ತನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಯುವಕರಿಗೆ ಸೂಕ್ತ ಮನ್ನಣೆ ನೀಡುವ ನಿಟ್ಟಿನಲ್ಲಿ ಸರ್ಕಾರ ಧೃಢ ಹೆಜ್ಜೆ ಇಡಲಿದೆ,” ಎಂದರು.
ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ನಡೆದ ‘ಮನ್ ಕಿ ಬಾತ್’ ವೀಕ್ಷಣೆ
ಪ್ರಧಾನಿ ನರೇಂದ್ರ ಮೋದಿ ಅವರ 136ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರವನ್ನು ಲೈವ್ ಸಂವಾದಕ್ಕೆ ಆಯ್ಕೆ ಮಾಡಿರುವುದು ಜಿಲ್ಲೆಯ ಜನರಿಗೆ ಸಿಕ್ಕ ದೊಡ್ಡ ಹೆಮ್ಮೆ ಎಂದು ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು. ಯುದ್ಧ, ಕೋವಿಡ್ ನಂತಹ ಎಂತಹದೇ ಸವಾಲುಗಳು ಬಂದರೂ ‘ಮನ್ ಕಿ ಬಾತ್’ ನಿಂತಿಲ್ಲ, ಇದು ವಿಶ್ವದಲ್ಲೇ ಹೊಸ ದಾಖಲೆ ಎಂದು ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ನೂರಾರು ಆಟೋ ಚಾಲಕರು, ಮಹಿಳೆಯರು, ಕಾರ್ಮಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ‘ಮನ್ ಕಿ ಬಾತ್’ ಆಲಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸೇರಿದಂತೆ ಹಲವು ಪ್ರಮುಖ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

