Home Education NewsUniversity ಕುವೆಂಪು ವಿವಿಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳಿಂದ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ!

ಕುವೆಂಪು ವಿವಿಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳಿಂದ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ!

by Mahesh malenaadu

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಜಾರಿಯಲ್ಲಿರುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ತಕ್ಷಣವೇ ರದ್ದುಗೊಳಿಸುವುದು ಹಾಗೂ ಸ್ನಾತಕೋತ್ತರ (PG) ಪ್ರವೇಶಾತಿ ಪ್ರಕ್ರಿಯೆಯನ್ನು ಪುನರಾರಂಭಿಸುವುದು ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿ, ನೂರಾರು ವಿದ್ಯಾರ್ಥಿಗಳು ಮಹಾವೀರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ, ವಿದ್ಯಾರ್ಥಿಗಳು ನಗರದ ಮಹಾವೀರ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿ ವಿವಿ ಆಡಳಿತ ಮಂಡಳಿಯ ವಿದ್ಯಾರ್ಥಿ ವಿರೋಧಿ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುರಿಯುತ್ತಿರುವ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ವಿದ್ಯಾರ್ಥಿಗಳು ಹೋರಾಟ ಮುಂದುವರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ (ADC) ಹಾಗೂ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು (Registrar) ಮಳೆಯ ನಡುವೆಯೇ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರಾದರೂ, ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಸ್ನಾತಕೋತ್ತರ ಪ್ರವೇಶಾತಿ ಪುನರಾರಂಭ: ಸಹ್ಯಾದ್ರಿ ಕಾಲೇಜಿನಲ್ಲಿ ತಡೆಹಿಡಿಯಲಾಗಿರುವ M.Sc ಮತ್ತು M.A ಸೇರಿದಂತೆ ಎಲ್ಲಾ ವಿಭಾಗಗಳ ಸ್ನಾತಕೋತ್ತರ ಪ್ರವೇಶಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು. ವಿವಿಯ ಪ್ರಸ್ತುತ ಧೋರಣೆಯು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕತ್ತಲೆ ತಂದೊಡ್ಡಿದೆ.

ಅಸಮರ್ಪಕ ಡಿಜಿಟಲ್ ಮೌಲ್ಯಮಾಪನ ರದ್ದು: ಪ್ರಸ್ತುತ ಜಾರಿಯಲ್ಲಿರುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳ ಅಂಕಗಳು ಕಡಿತಗೊಂಡು ಅನ್ಯಾಯವಾಗುತ್ತಿದೆ. ಹೀಗಾಗಿ ಈ ಅಪೂರ್ಣ ಪದ್ಧತಿಯನ್ನು ತಕ್ಷಣವೇ ಕೈಬಿಡಬೇಕು.

ಕ್ರೀಡಾ ಶುಲ್ಕದ ಪಾರದರ್ಶಕತೆ: ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಕ್ರೀಡಾ ನಿಧಿಯ ಲೆಕ್ಕಪತ್ರ ಪಾರದರ್ಶಕವಾಗಿರಬೇಕು. ಕ್ರೀಡಾ ಶುಲ್ಕದ ದುರ್ಬಳಕೆಗೆ ತಡೆ ನೀಡಿ, ವಿದ್ಯಾರ್ಥಿಗಳಿಗೆ ಸೂಕ್ತ ಕ್ರೀಡಾ ಸಾಮಗ್ರಿ, ಮೈದಾನದ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಲು ಆ ಹಣವನ್ನು ಸರಿಯಾಗಿ ಬಳಸಬೇಕು.

ಘಟಿಕೋತ್ಸವ ದಿನಾಂಕ ಘೋಷಣೆ: ಕುವೆಂಪು ವಿವಿಯಲ್ಲಿ ಅನೇಕ ವರ್ಷಗಳಿಂದ ಘಟಿಕೋತ್ಸವ ನಡೆಸದ ಕಾರಣ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳು ಸಿಗದೆ, ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದೆ. ತಕ್ಷಣವೇ ಘಟಿಕೋತ್ಸವ ದಿನಾಂಕವನ್ನು ಘೋಷಿಸಬೇಕು.

ಉಗ್ರ ಹೋರಾಟದ ಎಚ್ಚರಿಕೆ: ವಿವಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ಶಕ್ತಿಯು ಬೀದಿಗಿಳಿದು ಮತ್ತಷ್ಟು ಉಗ್ರ ಹೋರಾಟ ನಡೆಸಲಿದೆ ಎಂದು ಎಬಿವಿಪಿ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

Spread the love

You may also like

Leave a Comment