ಶಿವಮೊಗ್ಗ: ನಗರದ ನೈಜ ಸೇವಾ ಸಂಸ್ಥೆಗಳ ಹಿತದೃಷ್ಟಿಯಿಂದ ಸಿ.ಎ. (ಸಿವಿಕ್ ಅಮೆನಿಟಿ) ನಿವೇಶನಗಳ ನವೀಕರಣ ಶುಲ್ಕ ಹಾಗೂ ಬಿಗಿಯಾದ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ, ಮಾನ್ಯ *ವಿಧಾನಪರಿಷತ್ ಶಾಸರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್* ಅವರು ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ನಗರಾಭಿವೃದ್ಧಿ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಸಚಿವರಿಗೆ ಸಲ್ಲಿಸಿದ ಪ್ರಮುಖ ಸಲಹೆಗಳು :
ಸರಳ ನವೀಕರಣ ಪ್ರಕ್ರಿಯೆ: 30 ವರ್ಷಗಳ ಗುತ್ತಿಗೆ ಅವಧಿ ಮುಗಿದ ನಂತರ ಸಿ.ಎ. ನಿವೇಶನಗಳ ನವೀಕರಣ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸದೆ, ಸರಳೀಕೃತ ನಿಯಮಗಳನ್ನು ಜಾರಿಗೆ ತರುವುದು.
ಕಠಿಣ ಕ್ರಮ ದುರುಪಯೋಗಕ್ಕೆ ಮಾತ್ರ: ನಿಯಮ ಉಲ್ಲಂಘಿಸುವ ಅಥವಾ ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳ ವಿರುದ್ಧ ಮಾತ್ರ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು; ನೈಜವಾಗಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ತೊಂದರೆ ನೀಡದಿರುವುದು.
ಕಟ್ಟಡ ನಿರ್ಮಾಣದ ಕಾಲಾವಕಾಶ ವಿಸ್ತರಣೆ: ಕಟ್ಟಡ ನಿರ್ಮಾಣಕ್ಕೆ ನಿಗದಿಪಡಿಸಿರುವ 3 ವರ್ಷಗಳ ಗಡುವನ್ನು ಪ್ರಸ್ತುತ ಸ್ಥಿತಿಗತಿಗಳನ್ನು ಆಧರಿಸಿ ಸೂಕ್ತವಾಗಿ ವಿಸ್ತರಿಸುವುದು.
ಶುಲ್ಕ ರಿಯಾಯಿತಿ ಹಾಗೂ ಸಬ್ಸಿಡಿ: ಲಾಭರಹಿತ, ಶೈಕ್ಷಣಿಕ, ಕ್ರೀಡೆ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ನೈಜ ಸಂಸ್ಥೆಗಳಿಗೆ ಕಡಿಮೆ ನವೀಕರಣ ಶುಲ್ಕ ಹಾಗೂ ಸಬ್ಸಿಡಿ ದರದಲ್ಲಿ ನಿವೇಶನ ಒದಗಿಸುವುದು, ಸೇರಿದಂತೆ ಹಲವು ಪ್ರಮುಖ ಸಲಹೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ಶಾಸಕರ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರು,ಇಲಾಖಾ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಮತ್ತು ನೈಜ ಸಂಸ್ಥೆಗಳ ಹಿತರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನೈಜ ಸೇವಾ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸಿ.ಎ. ನಿವೇಶನ ನಿಯಮಗಳ ಸರಳೀಕರಣಕ್ಕೆ “ಮಾನ್ಯ ವಿಧಾನ ಪರಿಷತ್ತಿನ ಶಾಸಕರಾದ ಡಿ.ಎಸ್.ಅರುಣ್” ರವರ ನಿರಂತರ ಪ್ರಯತ್ನ ಇದಾಗಿದೆ.

