ಶಿವಮೊಗ್ಗ: ಶಿವಮೊಗ್ಗದಿಂದ ನೇಪಾಳ ಪ್ರವಾಸ ಕೈಗೊಂಡಿದ್ದ ಎಲ್ಲಾ 56 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ನೇಪಾಳ ಪ್ರವಸಕ್ಕೆ ತೆರಳಿದ್ದ ಪ್ರವಾಸಿಗರು, ವಿಡಿಯೋ ಮೂಲಕ ನಾವು ಸುರಕ್ಷಿತವಾಗಿ ಇದ್ದೆವೆಂದು ತಿಳಿಸಿದ್ದಾರೆ. ಆ. 23 ರಿಂದ 29ರ ವರೆಗೆ ಹೊಸನಗರ, ಶಿವಮೊಗ್ಗ ಹಾಗು ಭದ್ರಾವತಿಯ ತಲಾ ಇಬ್ಬರು ಪ್ರವಾಸಿಗರು ಸೇರಿದಂತೆ ಒಟ್ಟು 56 ಮಂದಿ ಪ್ರವಾಸಿಗರು ನೇಪಾಳ ಪ್ರವಾಸಕ್ಕೆ ತೆರಳಿದ್ದರು.
ಆ. 26ರಂದು ಏಕಾಏಕೀ ನೇಪಾಳದಲ್ಲಿ ಸಂಭವಿಸಿದ ಜಲಪ್ರಳಯವು ನೂರಾರು ಜನರನ್ನು ಬಲಿ ತೆಗೆದುಕೊಂಡು ಹತ್ತಾರು ಜನವಸತಿ ಪ್ರದೇಶಗಳನ್ನು ಆಪೋಷನ ತೆಗೆದುಕೊಂಡಿತ್ತು. ನೇಪಾಳ ಪ್ರವಾಸದಲ್ಲಿದ್ದ ಶಿವಮೊಗ್ಗ ಪ್ರವಾಸಿಗರು ದಕ್ಷಿಣ ನೇಪಾಳ ಪ್ರವಾಸ ಮುಗಿಸಿ, ಪೋಕ್ರ ಮೂಲಕ ದೇಶದ ರಾಜಧಾನಿ ಕಟ್ಮಂಡು ಪಟ್ಟಣ ತಲುಪಿದಾಗ ಅಲ್ಲಿನ ಸರ್ಕಾರ ಪ್ರವಾಸಿಗರನ್ನು ಮುಂದೆ ಸಾಗದಂತೆ ತಡೆ ಹಾಕಿದೆ.
ಇನ್ನು ಎಲ್ಲಾ 56 ಪ್ರವಾಸಿಗರು ಪ್ರವಾಸ ಮೊಟಕುಗೊಳಿಸಿ ಸುರಕ್ಷಿತವಾಗಿ ಭಾರತ ದೇಶದ ಗಡಿ ಪ್ರವೇಶಿಸಿ ಪ್ರಸ್ತುತ ಭಗವಾನ ಬುದ್ದನ ಜನ್ಮ ಸ್ಥಳವಾದ ಲೂಂಬಿನಿ ಪಟ್ಟಣದಲ್ಲಿ ಠಿಕಾಣಿ ಹೂಡಿದ್ದಾರೆ. ಶಿವಮೊಗ್ಗದ ರವಿ ಮತ್ತು ಹರೀಶ್, ಭದ್ರಾವತಿಯ ಮಂಜುನಾಥ ಮತ್ತು ಕಾಂತರಾಜ್ ಹಾಗೂ ಹೊಸನಗರದ ಜ್ಯೋತಿ, ಪ್ರಶಾಂತ್ ಸೇರಿ ರಾಜ್ಯದ ವಿವಿಧ ಪ್ರದೇಶದ 56 ಪ್ರವಾಸಿಗರು ಸಂರಕ್ಷಿತ ಸ್ಥಳದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

