Home Uncategorized 105 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಉದ್ಯೋಗ ಸಾಲ ವಿತರಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ.

105 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಉದ್ಯೋಗ ಸಾಲ ವಿತರಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ.

by Mahesh malenaadu

ಶಿವಮೊಗ್ಗ: “ಸಮಾಜದಲ್ಲಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು ಮುಖ್ಯವಾಹಿನಿಗೆ ತರಲು ಉದ್ಯೋಗ ಆಧಾರಿತ ಆರ್ಥಿಕ ನೆರವು ಅತ್ಯಗತ್ಯವಾಗಿದ್ದು, ಫಲಾನುಭವಿಗಳು ನಿಗಮದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ನಡೆಸಬೇಕು” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ಶಾಸಕರ ಅಧಿಕೃತ ಕಾರ್ಯಾಲಯವಾದ ಶಿವಮೊಗ್ಗದ ‘ಕರ್ತವ್ಯ ಭವನ’ದಲ್ಲಿ ಇಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಒಟ್ಟು 50 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಹಾಗೆಯೇ ಸ್ವಯಂ ಉದ್ಯೋಗದ ಮೂಲಕ ಜೀವನ ಕಂಡುಕೊಳ್ಳಲು ಇಚ್ಛಿಸಿದ 55 ಅರ್ಹ ಅಭ್ಯರ್ಥಿಗಳಿಗೆ ನಿಗಮದ ನೇರ ಸಾಲ ಯೋಜನೆಯಡಿ ಸಾಲದ ಪತ್ರ ಹಾಗೂ ಸಹಾಯಧನದ (ಸಬ್ಸಿಡಿ) ಮಂಜೂರಾತಿ ಆದೇಶಗಳನ್ನು ಶಾಸಕರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ನಮ್ಮ ಅವಧಿಯಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಅರ್ಹತೆ ಹೊಂದಿರುವ ನೈಜ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ತಲುಪುವಂತೆ ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ತವ್ಯ ಭವನವು ಸದಾ ಸಾರ್ವಜನಿಕರ ಹಿತರಕ್ಷಣೆಗೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಮುಕ್ತವಾಗಿರುತ್ತದೆ” ಎಂದರು.

ಇದೇ ವೇಳೆ ಸೌಲಭ್ಯಗಳನ್ನು ಸ್ವೀಕರಿಸಿದ ಫಲಾನುಭವಿಗಳು ಶಾಸಕರ ತ್ವರಿತ ಸ್ಪಂದನೆ ಹಾಗೂ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕುಶಾಲ್, ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸುನಿತಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜ್ಞಾನೇಶ್ವರ್, ಶ್ರೀ ನಾಗರಾಜ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ನವಲೆ, ಬಿಜೆಪಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ಶ್ರೀನಿವಾಸ್, ಪ್ರಮುಖರಾದ ಶ್ರೀಮತಿ ನಿರ್ಮಲ, ಶ್ರೀ ಶ್ರೀನಾಗ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀಮತಿ ಸುರೇಖಾ ಮುರಳಿಧರ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಶಾಸಕರ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

– ಶಾಸಕರ ಕಾರ್ಯಾಲಯ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ

Spread the love

You may also like

Leave a Comment