ರಾಜ್ಯ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಬಹಿರಂಗ ಮನವಿ
ಶಿವಮೊಗ್ಗ: ಮಲೆನಾಡಿನ ರೈತರ ಬದುಕಿನ ಬೆನ್ನೆಲುಬಾಗಿದ್ದ ಅಡಿಕೆ ತೋಟಗಳು ಇತ್ತೀಚಿನ ಬಿರುಗಾಳಿ ಹಾಗೂ ಅಕಾಲಿಕ ಮಳೆಯ ಅಬ್ಬರಕ್ಕೆ ನೆಲಸಮವಾಗಿವೆ. ಹತ್ತಾರು ವರ್ಷಗಳ ಕಾಲ ಮಗುವಿನಂತೆ ಸಾಕಿ-ಸಲುಹಿದ ಲಕ್ಷಾಂತರ ಅಡಿಕೆ ಮರಗಳು ಒಂದೇ ರಾತ್ರಿ ಧರೆಗುರುಳಿವೆ. ಆದರೆ ಈ ಮಹಾ ದುರಂತಕ್ಕೆ ಸರ್ಕಾರ ನಿಗದಿಪಡಿಸಿರುವ ಪರಿಹಾರ ಒಂದು ಮರಕ್ಕೆ ಕೇವಲ 17 ರೂಪಾಯಿ ಎನ್ನುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರಜಾ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿನ್ಸೆಂಟ್ ರೋಡ್ರಿಗಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಂದು ಒಂದು ಅಡಿಕೆ ಗಿಡದ ಬೆಲೆಯೇ 120 ರೂಪಾಯಿಗಿಂತ ಹೆಚ್ಚು. ಬಿದ್ದ ಮರವನ್ನು ತೆರವುಗೊಳಿಸುವುದು, ಗುಂಡಿ ತೋಡುವುದು, ಹೊಸ ಗಿಡ ನೆಡುವುದು, ಗೊಬ್ಬರ, ಕಾರ್ಮಿಕ ವೆಚ್ಚ—ಇವೆಲ್ಲ ಸೇರಿ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಫಲ ನೀಡುವ ಹಂತಕ್ಕೆ ಬರಲು ವರ್ಷಗಳ ಕಾಲ ಶ್ರಮಿಸಬೇಕಾಗುತ್ತದೆ. ಅಂತಹ ಮರಕ್ಕೆ ಸರ್ಕಾರ 17 ರೂಪಾಯಿ ಬೆಲೆ ಕಟ್ಟಿರುವುದು ರೈತನ ಪರಿಶ್ರಮಕ್ಕೆ ಮಾಡಿದ ಘೋರ ಅವಮಾನ. ಇದು ಪರಿಹಾರವಲ್ಲ, ರೈತರನ್ನು ಅಪಹಾಸ್ಯ ಮಾಡುವ ಕ್ರಮ” ಎಂದು ಅವರು ಕಿಡಿಕಾರಿದ್ದಾರೆ.
ಭದ್ರಾವತಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಭಾರಿ ಹಾನಿ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಮಲ್ಲಿಗೆನಹಳ್ಳಿ, ತಡಸ, ಗುಡುಮಗಟ್ಟೆ, ಮೈದೊಳಲು, ಅಶೋಕನಗರ, ಯಡೆಹಳ್ಳಿ, ಆನವೇರಿ, ಮಾಲ್ಲಾಪುರ, ಹನುಮಂತಾಪುರ, ಅರಹತೋಳಲು, ಕನಸಿನಕಟ್ಟೆ, ಭಾಗವತಿಕೆರೆ, ಕ್ಯಾಂಪು, ಮಂಗೊಟ್ಟೆ, ನಾಗಸಮುದ್ರ, ಸಿದ್ಲಿಪುರ, ಕೊಡಮಗ್ಗೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 974 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು, 12 ಲಕ್ಷಕ್ಕೂ ಅಧಿಕ ಅಡಿಕೆ ಮರಗಳು ಧರೆಗುರುಳಿವೆ. ಸಾವಿರಾರು ರೈತ ಕುಟುಂಬಗಳು ತಮ್ಮ ಬದುಕಿನ ಆಸರೆಯನ್ನೇ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿವೆ.
ವಿಮಾ ಕಂಪನಿಗಳ ನಿರ್ಲಕ್ಷ್ಯ ಖಂಡನೀಯ
ನಿಯಮಿತವಾಗಿ ವಿಮೆ ಕಂತು ಪಾವತಿಸಿದ ರೈತರಿಗೆ ತಾಂತ್ರಿಕ ನೆಪಗಳನ್ನು ಮುಂದಿಟ್ಟು ವಿಮಾ ಕಂಪನಿಗಳು ಪರಿಹಾರ ನಿರಾಕರಿಸುತ್ತಿರುವುದು ಅತ್ಯಂತ ಖಂಡನೀಯ. ರೈತರಿಂದ ಪ್ರೀಮಿಯಂ ಪಡೆಯುವಾಗ ಯಾವುದೇ ಅಡ್ಡಿಯಿಲ್ಲ; ಆದರೆ ಸಂಕಷ್ಟದ ಸಮಯದಲ್ಲಿ ಕೈಕಟ್ಟಿ ನಿಲ್ಲುವುದು ವಿಮಾ ವ್ಯವಸ್ಥೆಯ ನೈತಿಕ ದಿವಾಳಿತನವಾಗಿದೆ.
ಇದಕ್ಕೆ ಪ್ರಮುಖ ಕಾರಣ ಹಳೆಯ ಹಾಗೂ ದೋಷಪೂರಿತ ಮಳೆ ಮಾಪನ ವ್ಯವಸ್ಥೆ. ಮಳೆ ಮಾಪನಗಳನ್ನು ತಕ್ಷಣ ವೈಜ್ಞಾನಿಕವಾಗಿ ಪರಿಷ್ಕರಿಸಿದರೆ ಎನ್‌ಡಿಆರ್‌ಎಫ್ ಪರಿಹಾರ ವಿತರಣೆಯಲ್ಲೂ ನಿಖರತೆ ಮತ್ತು ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ.
ಎರಡು ದಶಕಗಳ ಹಿಂದಿನ ಮಾನದಂಡಗಳಿಂದ ಇಂದಿನ ರೈತನ ಬದುಕು ಉಳಿಯುವುದಿಲ್ಲ
ಸುಮಾರು ಎರಡು ದಶಕಗಳ ಹಿಂದಿನ ಎನ್‌ಡಿಆರ್‌ಎಫ್ (NDRF) ಪರಿಹಾರ ಮಾನದಂಡಗಳನ್ನು ಇಂದಿಗೂ ಯಥಾವತ್ತಾಗಿ ಅನುಸರಿಸುವುದು ಸಂಪೂರ್ಣ ಅವೈಜ್ಞಾನಿಕ. ಇಂದಿನ ಕಾರ್ಮಿಕರ ಕೂಲಿ, ಗೊಬ್ಬರದ ಬೆಲೆ, ಕೃಷಿ ಹೂಡಿಕೆ ಮತ್ತು ನಿರ್ವಹಣಾ ವೆಚ್ಚವನ್ನು ಪರಿಗಣಿಸದ ಪರಿಹಾರ ಮೊತ್ತ ರೈತರ ನೋವಿಗೆ ಯಾವುದೇ ರೀತಿಯ ನ್ಯಾಯ ಒದಗಿಸುವುದಿಲ್ಲ.
ಪ್ರಮುಖ ಬೇಡಿಕೆಗಳು
– ಪ್ರಕೃತಿ ವಿಕೋಪವನ್ನು ವಿಶೇಷ ಪ್ರಕರಣವೆಂದು ಘೋಷಿಸಿ ಹಳೆಯ NDRF ಮಾನದಂಡಗಳನ್ನು ಬದಿಗಿಟ್ಟು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು.
– ಅಡಿಕೆ ಬೆಳೆಗಾರರಿಗೆ ವಾಸ್ತವ ನಷ್ಟದ ಆಧಾರದ ಮೇಲೆ ಸಮರ್ಪಕ ಪರಿಹಾರ ಹಾಗೂ ವಿಮೆ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು.
– ಬೆಳೆ ಸಾಲ ಮನ್ನಾ ಹಾಗೂ ಸಾಲ ಮರುಪಾವತಿಗೆ ವಿಶೇಷ ಸಡಿಲಿಕೆ ನೀಡಬೇಕು.
– ಅಡಿಕೆ ಬೆಳೆ ನಂಬಿ ಮನೆ ಕಟ್ಟಿಕೊಂಡ ರೈತರಿಗೆ ಬ್ಯಾಂಕ್ ಸಾಲದ ಕಂತುಗಳಲ್ಲಿ ರಿಯಾಯಿತಿ ನೀಡಬೇಕು.
– ಅಡಿಕೆ ಬೆಳೆಗಾರರ ಪುನರ್ವಸತಿಗಾಗಿ ಪ್ರತ್ಯೇಕ ಯೋಜನೆ ಜಾರಿಗೊಳಿಸಬೇಕು.
ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸ್ವಾಗತಾರ್ಹ. ಆದರೆ ಅದು ಕೇವಲ ಕಡತದಲ್ಲೇ ಉಳಿಯಬಾರದು. ಸರ್ಕಾರ ತಕ್ಷಣ ನಿರ್ಧಾರ ಕೈಗೊಂಡು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿ ರೈತರ ಬದುಕನ್ನು ಪುನರ್‌ನಿರ್ಮಿಸಬೇಕು.
“ಅನ್ನ ಬೆಳೆಯುವ ರೈತನ ಬೆವರಿಗೆ ಕೇವಲ 17 ರೂಪಾಯಿ ಬೆಲೆ ಕಟ್ಟುವ ಸರ್ಕಾರ, ರೈತನ ಕಣ್ಣೀರಿನ ಬೆಲೆ ಎಷ್ಟು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ರೈತನನ್ನು ಉಳಿಸಿದರೆ ದೇಶದ ಕೃಷಿ ಉಳಿಯುತ್ತದೆ; ರೈತನನ್ನು ನಿರ್ಲಕ್ಷಿಸಿದರೆ ಅದರ ಬೆಲೆ ಇಡೀ ಸಮಾಜ ತೆರಬೇಕಾಗುತ್ತದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ರೈತರ ಪರವಾಗಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು,” ಎಂದು ಪ್ರಜಾ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿನ್ಸೆಂಟ್ ರೋಡ್ರಿಗಸ್ ಎಚ್ಚರಿಸಿದ್ದಾರೆ.

