ಸಿನಿಮೀಯ ಶೈಲಿಯಲ್ಲಿ ದನಗಳ್ಳರ ಬೆನ್ನಟ್ಟಿದ ಪೊಲೀಸರು! ಕಾರು ಜಪ್ತಿ, ಕಾಡಿನಲ್ಲಿ ಖದೀಮರಿಗಾಗಿ ಡ್ರೋನ್ ಶೋ
ರಿಪ್ಪನ್‌ಪೇಟೆ / ಆಗುಂಬೆ: ಇತ್ತೀಚೆಗೆ ಆಗುಂಬೆ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಸರಣಿಯಾಗಿ ನಡೆಯುತ್ತಿದ್ದ ದನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದನಗಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹಿಡಿಯಲು ಯತ್ನಿಸಿದ ರೋಚಕ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಘಾಟಿ ರಸ್ತೆಯಲ್ಲಿ ನಡೆದಿದೆ.
ಪೊಲೀಸರ ತೀವ್ರ ಚೇಸಿಂಗ್‌ನಿಂದ ಕಂಗಾಲಾದ ಮೂವರು ದನಗಳ್ಳರು ಕಾರನ್ನು ರಸ್ತೆಬದಿಯಲ್ಲೇ ಬಿಟ್ಟು ದಟ್ಟ ಅರಣ್ಯದೊಳಗೆ ಓಡಿ ಪರಾರಿಯಾಗಿದ್ದಾರೆ.
ಆಗುಂಬೆ ಭಾಗದಲ್ಲಿ ಸಾಕುಪ್ರಾಣಿ ಹಾಗೂ ದನಗಳ ಕಳ್ಳತನ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಗುಂಬೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇಂದು ಖಚಿತ ಮಾಹಿತಿ ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಿದ್ದ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಪೊಲೀಸರನ್ನು ಕಾಣುತ್ತಿದ್ದಂತೆ ಆರೋಪಿಗಳು ಕಾರಿನ ವೇಗ ಹೆಚ್ಚಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ.
ತಕ್ಷಣವೇ ಜಾಗೃತರಾದ ಆಗುಂಬೆ ಮತ್ತು ರಿಪ್ಪನ್‌ಪೇಟೆ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದು, ರಿಪ್ಪನ್‌ಪೇಟೆ ಘಾಟಿ ರಸ್ತೆಯಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಪೊಲೀಸರ ಚೇಸಿಂಗ್ ತೀವ್ರಗೊಳ್ಳುತ್ತಿದ್ದಂತೆ, ಬೆನವಳ್ಳಿ ಬಸ್ ನಿಲ್ದಾಣದ ಪಕ್ಕದ ಕಚ್ಚಾ ರಸ್ತೆಯಲ್ಲಿ ಕಾರನ್ನು ಬಿಟ್ಟು ಮೂವರೂ ಖದೀಮರು ಪಕ್ಕದಲ್ಲೇ ಇದ್ದ ದಟ್ಟ ಕಾಡಿನೊಳಗೆ ಓಡಿ ಕಣ್ಮರೆಯಾಗಿದ್ದಾರೆ.
ಡ್ರೋನ್ ಕ್ಯಾಮೆರಾ ಬಳಸಿ ಶೋಧ ಕಾರ್ಯಾಚರಣೆ
ಆರೋಪಿಗಳು ಬಿಟ್ಟುಹೋದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದು, ಅದರೊಳಗಿನ ಸುಳಿವುಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದಾರೆ. ದಟ್ಟ ಅರಣ್ಯದಲ್ಲಿ ಅಡಗಿರುವ ಆರೋಪಿಗಳ ಚಲನವಲನ ಪತ್ತೆಹಚ್ಚಲು ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿಕೊಂಡು ಕಾಡಿನಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಆಗುಂಬೆ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಜಂಟಿ ತಂಡವು ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದೆ.

