ಸಾಗರ: ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ದಿಟ್ಟತನದಿಂದ ಕಡಿವಾಣ ಹಾಕಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಸಾರ್ವಜನಿಕ ಆಸ್ತ ಹಾಗೂ ಸರ್ಕಾರಿ ಜಾಗಗಳ ರಕ್ಷಣೆಗೆ ಇಳಿದಿರುವ ಅವರು, ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದಾರೆ.
ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿ ವಶ:
ಸಾಗರ ತಾಲೂಕಿನ ಬೊಮ್ಮತ್ತಿ ಸಮೀಪದ ಬ್ರಾಹ್ಮಣ ಮಂಚಾಲೆ ಗ್ರಾಮದ ಸರ್ವೇ ನಂಬರ್ 107ರಲ್ಲಿ ಯಾವುದೇ ರೀತಿಯ ಅಧಿಕೃತ ಅನುಮತಿ ಇಲ್ಲದೆ ಅಕ್ರಮವಾಗಿ ಜಂಬಿಟ್ಟಿಗೆ ಗಣಿಗಾರಿಕೆ ನಡೆಸಿ, ಲಾರಿಯಲ್ಲಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆಯಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಗುರುರಾಜ್ ಹಾಗೂ ಇತರ ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.
‘ಕಠಿಣ ಕಾನೂನು ಕ್ರಮ’ – ತಹಶೀಲ್ದಾರ್ ಖಡಕ್ ಎಚ್ಚರಿಕೆ:
ಇದೇ ವೇಳೆ ಅಕ್ರಮ ದಂಧೆಕೋರರಿಗೆ ನೇರವಾಗಿ ವಾರ್ನಿಂಗ್ ನೀಡಿರುವ ತಹಶೀಲ್ದಾರ್, “ತಾಲೂಕಿನಲ್ಲಿ ಇನ್ಮುಂದೆ ಯಾರಾದರೂ ಅಕ್ರಮ ಗಣಿಗಾರಿಕೆ ಅಥವಾ ಅಕ್ರಮ ಒತ್ತುವರಿಯಲ್ಲಿ ತೊಡಗಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕೇಸ್ ಜರುಗಿಸಲಾಗುವುದು, ಹುಷಾರ್!” ಎಂದು ಎಚ್ಚರಿಸಿದ್ದಾರೆ.
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ತಹಶೀಲ್ದಾರ್ ಅವರ ಈ ದಿಟ್ಟ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

