ಶಿವಮೊಗ್ಗ : ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿರುವ ನಿರ್ಧಾರದಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣವೇ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಳೆದ 20 ದಿನಗಳಿಂದ ಅಡಿಕೆ ಮಾರುಕಟ್ಟೆ ಮೇಲೆ ಗುಟ್ಕಾ ನಿಷೇಧವು ತೀವ್ರ ದುಷ್ಪರಿಣಾಮ ಬೀರಿದೆ. ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ಕರ್ನಾಟಕದಲ್ಲೇ ಈ ರೀತಿ ನಿಷೇಧ ಹೇರಿರುವುದರಿಂದ ರೈತರಿಗೆ ಭಾರೀ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಕ್ಷಾಂತರ ರೈತರು ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಅಡಿಕೆ ಬೆಳೆಯುವ ರಾಜ್ಯದಲ್ಲೇ ಗುಟ್ಕಾ ಬ್ಯಾನ್ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಇದರಿಂದ ಅಡಿಕೆ ಮಾರುಕಟ್ಟೆ ಕುಸಿದು ಬೆಳೆಗಾರರು ಕಂಗೆಡುವಂತಾಗಿದೆ,
ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಆಗ್ರಹಿಸಿ, ನಾಳೆ ಎಲ್ಲಾ ಪಕ್ಷಗಳ ಅಡಿಕೆ ವಲಯದ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಸರ್ಕಾರ ತಕ್ಷಣವೇ ಅಡಿಕೆ ಬೆಳೆಗಾರರ ಕಲ್ಯಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

