ಕಳೆದ 100 ವರ್ಷಗಳಲ್ಲಿ ಮಲೆನಾಡು ಕಂಡು ಕೇಳರಿಯದ ಅನಾವೃಷ್ಟಿ ಉಂಟಾಗಿದ್ದು, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ 157 ತಾಲ್ಲೂಕುಗಳಲ್ಲಿ ಅನಾವೃಷ್ಠಿ ಇದೆ. 14 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿದೆ. ಕಳೆದ ಮೂರು ತಿಂಗಳಲ್ಲಿ 31ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಯಾವ ಅಧಿಕಾರಿ ಕೂಡ ರೈತರ ಜಮೀನಿಗೆ ಹೋಗಿಲ್ಲ. ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್. ಅನುದಾನವನ್ನು ನೀಡಿ ನೆರವಿಗೆ ಬರಬೇಕು ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರ ಇದೂವರೆಗೆ ಎಷ್ಟು ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂಬ ವರದಿಯನ್ನು ಸೂಚಿಸಿಲ್ಲ. ಅದಕ್ಕಾಗಿ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಈಶ್ವರಪ್ಪ ದೂರಿದ್ದಾರೆ.
ಐದಾರು ತಿಂಗಳು ಕಳೆದು ಹೋಗಿದೆ. ಕ್ಯಾಬಿನೆಟ್ ಪೂರ್ಣ ಮಾಡಲು ಆಗಿಲ್ಲ. ಕೇಂದ್ರದ ಕಾಂಗ್ರೆಸ್ ನಾಯಕರು ರಾಜ್ಯ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ವತಃ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ನಿನ್ನೆ ಬೆಂಗಳೂರಿಗೆ ಬಂದಿದ್ದು, ಸಂಪುಟ ವಿಸ್ತರಣೆಯ ಬಗ್ಗೆ ನನಗೇನೂ ಗೊತ್ತಿಲ್ಲ. ದೆಹಲಿಯಿಂದ ಬಂದವರಿಗೆ ಕೇಳಿ ಅನ್ನುತ್ತಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಶೇ. 81ರಷ್ಟು ಮಳೆ ಕೊರತೆಯಾಗಿದೆ. ಮಳೆ ಇಲ್ಲದೆ ಬಿತ್ತನೆ ನಾಶವಾಗಿದೆ. ರೈತರು 1ವರೆ ಲಕ್ಷ ರೂ. ಬೆಲೆಬಾಳುವ ರಾಸುಗಳನ್ನು 50,000 ರೂ.ಗಳಿಗೆ ಮಾರುತ್ತಿದ್ದಾರೆ. ಅವರು ಕಸಾಯಿಖಾನೆಗೆ ಹೋಗುತ್ತಿದೆ. ಜಾನುವಾರುಗಳಿಗೆ ಮೇವಿಲ್ಲ. ಇಷ್ಟೊಂದು ಬೇಜಾವಾಬ್ದಾರಿ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಕಂಡಿರಲಿಲ್ಲ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.

