Home ಅಪರಾಧ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ಎಂ.ಎಲ್.ಸಿ. ಡಿ.ಎಸ್. ಅರುಣ್ ಆರೋಪ

ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ಎಂ.ಎಲ್.ಸಿ. ಡಿ.ಎಸ್. ಅರುಣ್ ಆರೋಪ

by Mahesh malenaadu
  1. ಶಿವಮೊಗ್ಗದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯ ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದು, ಡಿಜಿಟಲೀಕರಣದ ನೆಪದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮೌಲ್ಯ ಮಾಪನವನ್ನು ತಕ್ಷಣ ನಿಲ್ಲಿಸುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕುವೆಂಪು ವಿವಿ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ. ವಿವಿ ಆಡಳಿತ ಮಂಡಳಿಗೆ ಸ್ವಯಂ ಆರ್ಥಿಕ ಶಿಸ್ತು ಬೆಳೆಸಿಕೊಳ್ಳುವಂತೆ ಎಷ್ಟು ಬಾರಿ ಸಲಹೆ ನೀಡಿದರೂ, ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೋ. ವೀರಭದ್ರಪ್ಪ ಆಗಲಿ, ಹಾಲಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿಯಾಗಲಿ, ಕುಲಸಚಿವರಾಗಲೀ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತರಾದವರಿಗೆ ಪಿಂಚಣಿ ನೀಡಲಾಗದಷ್ಟು ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ಸಾಲಿನಲ್ಲಿ ವಿವಿಯಿಂದ 47 ಕೋಟಿ ರೂಪಾಯಿ ಖೋತಾ ಬಜೆಟ್ ಮಂಡನೆಯಾಗಿದೆ. ಇದನ್ನು ತುಂಬಿಕೊಳ್ಳಲು ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ವಿವಿಧ ಬಾಬತ್ತಿನ ಹೆಸರಿನಲ್ಲಿ ಹೆಚ್ಚಿನ ಶುಲ್ಕ ಆಕರಿಸುತ್ತಿದೆಯಾದರೂ ಈ ಹಣದ ಸದ್ಭಳಕೆಯಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಒಂದನ್ನು ಬಿಟ್ಟರೆ ಬೇರೆ ಯಾವ ವಿಶ್ವವಿದ್ಯಾಲಯಗಳೂ ಡಿಜಿಟಲ್ ಮೌಲ್ಯ ಮಾಪನಕ್ಕೆ ಕೈಹಾಕಿಲ್ಲ. ಆದರೆ ಕುವೆಂಪು ವಿ.ವಿ. ಯಾವುದೇ ಚರ್ಚೆ, ತಯಾರಿ ಇಲ್ಲದೆ, ಯಾರ ಗಮನಕ್ಕೂ ತರದೇ ಇದನ್ನು ಅಳವಡಿಸಿಕೊಂಡಿದೆ. ವಿದ್ಯಾ ವಿಷಯಕ್ಕೆ ಪರಿಷತ್ತಿನಲ್ಲಿಯೂ ಇದು ಅನುಮೋದನೆಯಾಗಿಲ್ಲ. ವಿವಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಡಿಜಿಟಲ್ ಮೌಲ್ಯಮಾಪನದ ಹೆಸರಿನಲ್ಲಿ 2 ಲಕ್ಷ 80 ಸಾವಿರ ಪುಟಗಳ ಉತ್ತರ ಪತ್ರಿಕೆಗಳನ್ನು ಸ್ಮ್ಯಾನ್ ಮಾಡಿಸಲಾಗುತ್ತಿದೆ. ಒಂದು ಪುಟಕ್ಕೆ 54 ರೂ.ನಂತೆ ಸ್ಕ್ಯಾನಿಂಗ್ ಮಾಡಿಸಲಾಗುತ್ತಿದೆ. ಹಾಲಿ ವ್ಯವಸ್ಥೆಯಲ್ಲಿ ಮೌಲ್ಯ ಮಾಪಕರು ಉತ್ತರ ಪ್ರತಿಕೆಗಳನ್ನು ಬಾರ್‌ ನಲ್ಲಿಯೂ ಕೂತು ಮೌಲ್ಯಮಾಪನ ಮಾಡಬಹುದು. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿನ ವ್ಯತ್ಯಾಸ ಗಮನಕ್ಕೆ ಬಂದಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನ್ಯೂವೆಲ್ ಮೌಲ್ಯಮಾಪನದಲ್ಲಿ ಒಂದು ಸೆಮಿಸ್ಟರ್ ಗೆ ವಿವಿಗೆ 1.1ಕೋಟಿ ವೆಚ್ಚ ತಗುಲುತ್ತಿದ್ದರೆ ಡಿಜಿಟಲ್ ಮೌಲ್ಯಮಾಪನಕ್ಕೆ ನಾನ್ ಯುಜಿಸಿ ಮೌಲ್ಯಮಾಪಕರ, ಬಾಹ್ಯ ಪರೀಕ್ಷಕರ ದಿನಭತ್ಯೆ, ಸ್ಥಳೀಯ ಭತ್ಯೆ ಇತ್ಯಾದಿಗಳನ್ನು ಹೊರತುಪಡಿಸಿ, 2.36 ಕೋಟಿ ರೂ. ವೆಚ್ಚವಾಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಡಿಜಿಟಲ್ ಮೌಲ್ಯಮಾಪನದ ಹಿಂದೆ ವಿವಿ ಬಿದ್ಧಿರುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರದ ಸಂಶಯ ಮೂಡಿದೆ ಎಂದು ಡಿ.ಎಸ್. ಅರುಣ್ ಹೇಳಿದ್ದಾರೆ.

Spread the love

You may also like

Leave a Comment