Home Uncategorized ಮಲೆನಾಡಿನಲ್ಲೂ ಹೊತ್ತಿಕೊಂಡ ಕಾವೇರಿ ಕಾವಿನ ಕಿಚ್ಚು!

ಮಲೆನಾಡಿನಲ್ಲೂ ಹೊತ್ತಿಕೊಂಡ ಕಾವೇರಿ ಕಾವಿನ ಕಿಚ್ಚು!

by Mahesh malenaadu

ಶಿವಮೊಗ್ಗ: ರಾಜ್ಯದಲ್ಲಿ ಈ ಬಾರಿ ಮಳೆಯ ಅಭಾವದಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿಲ್ಲದೆ ಕನ್ನಡಿಗರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸೂಚಿಸಿರುವುದನ್ನು ಖಂಡಿಸಿ, ಈಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಪ್ರತಿಭಟನೆಯ ಕಿಚ್ಚು ಜೋರಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ.) ಕಾರ್ಯಕರ್ತರು ಇಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ ,

ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಕ.ರ.ವೇ. ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾವೇರಿ ನಿರ್ವಹಣಾ ಸಮಿತಿಗೆ ಧಿಕ್ಕಾರ ತಮಿಳುನಾಡಿಗೆ ನೀರು ಹರಿಸುವಂತೆ ಏಕಪಕ್ಷೀಯ ಶಿಫಾರಸ್ಸು ಮಾಡಿರುವ ‘ಕಾವೇರಿ ನೀರು ನಿರ್ವಹಣಾ ಸಮಿತಿ’ಯ (CWRC) ನಿರ್ಧಾರವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.

ನಮ್ಮ ಕುಡಿಯುವ ನೀರಿಗೆ ಆದ್ಯತೆ ನೀಡಿ, ರಾಜಕೀಯ ಒತ್ತಡಕ್ಕೆ ಮಣಿಯಬೇಡಿ! ನೀರು ಹರಿಸುವುದನ್ನು ತಕ್ಷಣವೇ ತಡೆಯಿರಿ, ಕೆ.ಆರ್.ಎಸ್., ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಈಗಾಗಲೇ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಕನ್ನಡಿಗರಿಗೇ ಕುಡಿಯುವ ನೀರಿನ ಅಭಾವವಿರುವಾಗ ತಮಿಳುನಾಡಿಗೆ ನೀರು ಹರಿಸುವುದು ರಾಜ್ಯದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಮಾಡುವ ತೀವ್ರ ಅನ್ಯಾಯ.

ಏಕಪಕ್ಷೀಯ ಆದೇಶ ತಿರಸ್ಕರಿಸಿ: ಕಾವೇರಿ ನೀರು ನಿರ್ವಹಣಾ ಸಮಿತಿಯ ಶಿಫಾರಸ್ಸನ್ನು ರಾಜ್ಯ ಸರ್ಕಾರ ತಕ್ಷಣವೇ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡಬಾರದು.
ಕೋರ್ಟ್‌ನಲ್ಲಿ ನೈಜ ಪರಿಸ್ಥಿತಿ ಮಂಡಿಸಿ:ರಾಜ್ಯ ಸರ್ಕಾರವು ತಮಿಳುನಾಡಿನ ಅಥವಾ ರಾಜಕೀಯದ ಯಾವುದೇ ಒತ್ತಡಕ್ಕೆ ಮಣಿಯಬಾರದು. ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ನೈಜ ಜಲಕ್ಷಾಮದ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಿ, ತಕ್ಷಣವೇ ಪುನರ್ ಪರಿಶೀಲನಾ ಅರ್ಜಿ (Review Petition) ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಮಲೆನಾಡಿನಲ್ಲೂ ಕಾವೇರಿ ಹೋರಾಟದ ಕಾವು ಏರಿರುವುದು ರಾಜ್ಯದಲ್ಲಿ ನೀರಿನ ಸಮಸ್ಯೆಯ ಗಂಭೀರತೆಗೆ ಕನ್ನಡಿ ಹಿಡಿದಂತಾಗಿದೆ.

Spread the love

You may also like

Leave a Comment