ಶಿವಮೊಗ್ಗ: ಜಿಲ್ಲೆಯಲ್ಲಿ ಮುಂದುವರಿದಿರುವ ಭಾರೀ ಮಳೆಯ ಆರ್ಭಟಕ್ಕೆ ಸರ್ಕಾರದ ಅಪೂರ್ಣ ಹಾಗೂ ವೈಜ್ಞಾನಿಕವಲ್ಲದ ಕಾಮಗಾರಿಗಳು ಸೇರಿಕೊಂಡು ಸಾರ್ವಜನಿಕರ ಜೀವನವನ್ನು ನರಕಸಮಾನವಾಗಿಸಿವೆ. ತಾಲೂಕಿನ ತುಮರಿ ಗ್ರಾಮದಲ್ಲಿ ಆಡಳಿತದ ನಿರ್ಲಕ್ಷ್ಯದಿಂದಾಗಿ ಹತ್ತಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಘಟನೆ ವರದಿಯಾಗಿದೆ.
ಇಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ಕಾಮಗಾರಿಯೇ ಕಂಟಕವಾಗಿದ್ದು, ತುಮರಿ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಇಂದಿರಾ ಗಾಂಧಿ ವಸತಿ ಶಾಲೆಯ ನಿರ್ಮಾಣಕ್ಕಾಗಿ ಗುಡ್ಡವನ್ನು ನೆಲಸಮಗೊಳಿಸಲಾಗಿತ್ತು. ಆದರೆ, ಮಳೆಗಾಲ ಆರಂಭವಾಗುವ ಮುನ್ನ ಸೂಕ್ತ ರಕ್ಷಣಾ ಗೋಡೆ ಅಥವಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ, ಸುರಿದ ಭಾರೀ ಮಳೆಗೆ ಗುಡ್ಡದ ಮಣ್ಣು ಸಂಪೂರ್ಣವಾಗಿ ಕೊಚ್ಚಿಕೊಂಡು ಕೆಳಭಾಗಕ್ಕೆ ಬಂದಿದೆ.
ಗುಡ್ಡದ ಮಣ್ಣು ಜಾರಿಕೊಂಡು ಬಂದು ರಸ್ತೆಮೇಲೆ ನಿಂತ ಹಿನ್ನಲೆ ಸಿಗಂದೂರು – ಕೊಲ್ಲೂರು ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಜಲಾವೃತಗೊಂಡು ಸ್ತಬ್ದಗೊಂಡಿದೆ.
ಮಣ್ಣು ಸಮೇತ ಗುಡ್ಡ ಕುಸುದ ಹಿನ್ನೆಲೆ ರಸ್ತೆ ಬದಿಯಲ್ಲಿದ್ದ ಹತ್ತಾರು ಮನೆಗಳ ಅಂಗಳ ಹಾಗೂ ಒಳಗಡೆ ಭಾರೀ ಪ್ರಮಾಣದ ಮಣ್ಣು ಮತ್ತು ಕೆಸರು ನೀರು ನುಗ್ಗಿದ್ದು, ನಿವಾಸಿಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಕಂಗಾಲಾಗಿದ್ದಾರೆ.
“ಯಾರೋ ಮಾಡಿದ ಎಡವಟ್ಟು ಮತ್ತು ಆಡಳಿತ ಯಂತ್ರದ ಬೇಜವಾಬ್ದಾರಿಗೆ ಇಂದು ಸಾಮಾನ್ಯ ಜನರು ಬೀದಿಗೆ ಬೀಳುವಂತಾಗಿದೆ. ಕಾಮಗಾರಿ ನಡೆಸುವಾಗ ಸ್ಥಳೀಯ ಆಡಳಿತ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದರೆ ಈ ಅನಾಹುತ ತಪ್ಪುತ್ತಿತ್ತು,” ಎಂದು ಗರಂ ಆದ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

