ಮಲೆನಾಡಿನಲ್ಲಿ ನಿರಂತರ ಜಿಟಿ, ಜಿಟಿ ಮಳೆಯಿಂದಾಗಿ ಬಹುತೇಕ ಗ್ರಾಮಗಳ ರಸ್ತೆ ಸಂಪೂರ್ಣವಾಗಿ ಹಾಳಾಗಿವೆ.
ಅಂತೆಯೆ ಹೊಸನಗರ ತಾಲೂಕಿನ ರಾಮಚಂದ್ರಪುರ ಗ್ರಾ.ಪಂ. ವ್ಯಾಪ್ತಿಯ ಚಾಮುಂಡಿ ಬೆಟ್ಟದ ಎದುರು ಹಾದು ಹೋಗುವ ಜಯನಗರ ಹಾಗೂ ಸಿಂಗಪುರ, ಖಬರ್ ಸ್ಥಾನ್ ರಸ್ತೆ ಸಂಪೂರ್ಣ ಹಾಳಾಗಿದೆ.
ಈ ಕುಗ್ರಾಮದಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು ಈ ಭಾಗದಲ್ಲಿ ಸಂಚಾರಕ್ಕೆ ಇರುವ ಒಂದೆ ಮಾರ್ಗವು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಗ್ರಾಮಸ್ಥರು ಸಂಚರಿಸುವುದೇ ದುಸ್ತರವಾಗಿತ್ತು.
ಈ ಹಿಂದೆ ಗ್ರಾ.ಪಂ. ಅನುದಾನದಲ್ಲಿ ಈ ಮಣ್ಣಿನ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು ಆದರೆ, ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು.
ಸಾರ್ವಜನಿಕರ ಸಂಚಾರ ಮಾಡಲು ಅಸಾಧ್ಯವಾಗಿ ಪರಿಣಮಿಸಿದ್ದ ರಸ್ತೆಯನ್ನು ಇದೀಗ ಗ್ರಾಮದ ಯುವಕಸ್ನೇಹಿತರ ಸಹಕಾರದಿಂದ ಜೆಲ್ಲಿ ಕಲ್ಲು, ಮಣ್ಣು, ಟಿಪ್ಪರ್, ಟ್ರಾಕ್ಟರ್ ಸೇರಿದಂತೆ ಹಲವು ಸಾಧನಗಳನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಿದ್ದಾನೆ
ರಸ್ತೆ ಸಮತಟ್ಟು ಮಾಡಿ ಸಂಚಾರಕ್ಕೆ ಯೋಗ್ಯ ರಸ್ತೆಯಾಗಿ ಮರು ನಿರ್ಮಾಣಕ್ಕೆ ಮುಂದಾಗಿದ್ದು ಯುವಕರ ಕಾರ್ಯವೈಖರಿಗೆ ಸ್ಥಳೀಯ ಗ್ರಾಮಸ್ಥರ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

