ಶಿವಮೊಗ್ಗ : ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೊಸನಗರ ತಾಲೂಕಿನ ಅಡುಗೋಡಿ ನಿವಾಸಿ ವೆಂಕಟೇಶ್ (36) ಬಂಧಿತ ಆರೋಪಿ.
ಅರಣ್ಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರಂದು ಜೆಎಂಎಫ್‌ಸಿ ನ್ಯಾಯಾಲಯ ಈತನಿಗೆ ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ನ್ಯಾಯಾಂಗ ಬಂಧನ ವಿಧಿಸಿತ್ತು. ಜೀಪಿನಲ್ಲಿ ಕರೆದೊಯ್ಯುವಾಗ ಬಟ್ಟೆಮಲ್ಲಪ್ಪ ಗ್ರಾಮದ ಹೋಟೆಲ್ ವೊಂದರ ಬಳಿ ಆಹಾರ ತರಲು ಅಧಿಕಾರಿಗಳು ತೆರಳಿದ್ದರು. ಈ ವೇಳೆ ಜೀಪಿನಲ್ಲಿದ್ದ ಸಿಬ್ಬಂದಿ ಚಕ್ರಪಾಣಿ ಮತ್ತು ಚಾಲಕ ನಾಗೇಂದ್ರ ಮೇಲೆ ದಾಳಿ ನಡೆಸಿ ಆರೋಪಿ ಪರಾರಿಯಾಗಿದ್ದನು.
ಈ ಕುರಿತು ಕೊಲ್ಲೂರು ವನ್ಯಜೀವಿ ವಲಯದ ಉಪವಲಯ ಅರಣ್ಯಾಧಿಕಾರಿ ಸುನೀಲ್ ಡಿ. ಕುಂಬಾರ್ ನೀಡಿದ ದೂರಿನನ್ವಯ ದೂರು ದಾಖಲಾಗಿತ್ತು. ಸಿಪಿಐ ಗೌಡಪ್ಪಗೌಡ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಂಕರಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳ ತಂಡ ಆರೋಪಿಯ ಮನೆಯ ಸಮೀಪವೇ ಆತನನ್ನು ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

