ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರು ತಕ್ಷಣ ಸಚಿವ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಿಶಾ ಸಮಿತಿ ಜಿಲ್ಲಾ ಸದಸ್ಯ ಹಾಗೂ ಬಿಜಿಪಿ ಮುಖಂಡ ಗಿರೀಶ್ ಈ. ಭದ್ರಾಪುರ ಒತ್ತಾಯಿಸಿದ್ದಾರೆ. 2024-25ನೇ ಸಾಲಿನಲ್ಲಿ ನಿಗಮದಲ್ಲಿ ನಡೆದ ಹಗರಣದ ತನಿಖೆ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಲ್ಲಿ ದೂರು ದಾಖಲಿಸಲಾಗಿದೆ. ದಿನಾಂಕ 23.07.2026 ರಂದು ಎಲ್ಲ ದಾಖಲೆಗಳೊಂದಿಗೆ ಅಧಿಕಾರಿಗಳು ಹಾಜರಾಗಿದ್ದು, ಮುಂದಿನ ವಿಚಾರಣೆ 20.09.2026ಕ್ಕೆ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.
ನಿಗಮದ ಸುಮಾರು 187 ಕೋಟಿ ರೂ. ಹಣವನ್ನು ನಕಲಿ ಚೆಕ್‍ಗಳು ಮತ್ತು ಆರ್ ಟಿ ಜಿ ಎಸ್ ಮೂಲಕ ದುರುಪಯೋಗಪಡಿಸಿಕೊಳ್ಳಲಾಗಿದೆ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ ನಗದು ಹಾಗೂ ಚಿನ್ನ ಖರೀದಿಗೆ ಬಳಸಲಾಗಿದೆ. ಅಕ್ರಮ ಟೆಂಡರ್ ಗಳಿಂದ ಸುಮಾರು 1.20 ಕೋಟಿ ರೂ. ಅಕ್ರಮ ಲಾಭ ಪಡೆಯಲಾಗಿದೆ ಎಂದು ತನಿಖಾ ಸಂಸ್ಥೆ ವರದಿ ನೀಡಿದೆ. ಎಸ್‍ಸಿ-ಎಸ್‍ಟಿ ಸಮುದಾಯಕ್ಕೆ ಮೀಸಲಾದ ಹಣದ ದುರುಪಯೋಗ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಕ್ರಮದ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. 187 ಕೋಟಿ ಹಣವನ್ನು 18% ಬಡ್ಡಿ ಸಮೇತ ವಸೂಲಿ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗಿರೀಶ್ ಆಗ್ರಹಿಸಿದ್ದಾರೆ.

