Home ರಾಜಕೀಯ ನಾಗೇಂದ್ರ ಸಂಪುಟ ಸೇರ್ಪಡೆ ‘ಅನೈತಿಕ ಆಯ್ಕೆ’: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಆಕ್ರೋಶ

ನಾಗೇಂದ್ರ ಸಂಪುಟ ಸೇರ್ಪಡೆ ‘ಅನೈತಿಕ ಆಯ್ಕೆ’: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಆಕ್ರೋಶ

by Mahesh malenaadu

ತೀರ್ಥಹಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಶಾಸಕ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ತೀವ್ರ ಅನೈತಿಕ ಆಯ್ಕೆಯಾಗಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.

ವಾಲ್ಮೀಕಿ ನಿಗಮದಲ್ಲಿದ್ದ ಸುಮಾರು 187 ಕೋಟಿ ರೂಪಾಯಿ ಬಡವರ ಹಣವನ್ನು ಕಡಲೆ-ಮಂಡಕ್ಕಿ ಹಂಚಿದಂತೆ ಲೂಟಿ ಮಾಡಲಾಗಿದೆ. ಈ ಪ್ರಕರಣದ ತನಿಖೆ ಇನ್ನೂ ಬಾಕಿ ಇರುವಾಗಲೇ ಅವಸರದಲ್ಲಿ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಯಲ್ಲಿ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದರು. ಹಣದ ಮೊತ್ತದಲ್ಲಿ ವ್ಯತ್ಯಾಸವಿರಬಹುದು, ಆದರೆ ಹಗರಣ ನಡೆದೇ ಇಲ್ಲ ಎಂದು ಅವರು ಎಲ್ಲೂ ಹೇಳಿಲ್ಲ. ಹೀಗಿದ್ದರೂ ಆರೋಪಿತ ವ್ಯಕ್ತಿಯನ್ನು ಹರಿಬಿರಿಯಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವ ಹಿನ್ನೆಲೆಯನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು

ಶಿವಮೊಗ್ಗ ಮೂಲದ ವಾಲ್ಮೀಕಿ ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವ ತೆತ್ತಿದ್ದಾರೆ. ಇಂದಿಗೂ ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಪ ಹೊತ್ತವರನ್ನು ಮತ್ತೆ ಮಂತ್ರಿ ಮಾಡಿರುವುದು ರಾಜ್ಯದ ಸಾಂಸ್ಕೃತಿಕ ಮೌಲ್ಯಗಳಿಗೆ ಮತ್ತು ಸಾರ್ವಜನಿಕ ಜೀವನದ ಗೌರವಕ್ಕೆ ತಂದ ಕಪ್ಪುಚುಕ್ಕೆ ಎಂದರು.

ಇಡೀ ದೇಶಕ್ಕೆ ನೈತಿಕತೆಯ ಬೋಧನೆ ಮಾಡುವ ಕಾಂಗ್ರೆಸ್ ನಾಯಕರು ಈ ಬಗ್ಗೆ ಏನು ಉತ್ತರ ನೀಡುತ್ತಾರೆ? ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಟ್ಟು ತಮ್ಮ ನೈತಿಕತೆಯನ್ನು ಪ್ರದರ್ಶಿಸಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.

Spread the love

You may also like

Leave a Comment