ಶಿವಮೊಗ್ಗ : ರಾಜ್ಯದಲ್ಲಿ ನೀಟ್ ಬ್ಯಾನ್ ಆಗಬೇಕು ಎನ್ನುವ ನಿಲುವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಕುರಿತಂತೆ ಮುಂದಿನ ನಡೆಯೇನು ಎನ್ನುವುದನ್ನು ಮುಖ್ಯಮಂತ್ರಿಗಳ ಜತೆಗೆ ಚರ್ಚೆ ನಡೆಸಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನೀಟ್ ರದ್ದುಗೊಳಿಸುವಂತೆ ಆಗ್ರಹಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ.
“ಪರೀಕ್ಷೆಗಳ ಹೆಸರಲ್ಲಿ ಮಕ್ಕಳ ಮೇಲೆ ಶೋಷಣೆ ಆಗಬಾರದು. ಅಲ್ಲದೆ, ಪರೀಕ್ಷೆ ಕಾರಣಕ್ಕಾಗಿಯೇ ಮಕ್ಕಳ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ನಾವು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಮೂರು ಪರೀಕ್ಷೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಇದು ಯಾರದೋ ಹಿತಾಸಕ್ತಿಗೆ ಅಲ್ಲ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದೇ ಆಗಿದೆ. ಆದರೆ ನೀಟ್ ನಲ್ಲಿ ಕೆಟ್ಟ ವ್ಯವಸ್ಥೆ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ದುರಂತ” ಎಂದರು.
“ರಾಜ್ಯದಲ್ಲಿ ಈ ಹಿಂದೆ ಇದ್ದ ಸಿಇಟಿ ಅತ್ಯುತ್ತುಮ ಮಾದರಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಅದರ ಬದಲಿಗೆ ಇಡೀ ದೇಶದ್ಯಾಂತ ಏಕ ಮಾದರಿ ಇರಲಿ ಎಂದು ನೀಟ್ ಜಾರಿಗೆ ತಂದಿತು. ಆದರೆ ಅದರಿಂದ ಆಗಿದ್ದೇನು? ರಾಜಸ್ಥಾನ, ಹರಿಯಾಣದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ದೊಡ್ಡ ಅವಾಂತರವೇ ನಡೆದು ಹೋಯಿತು. ಪರೀಕ್ಷೆಗಾಗಿ ವರ್ಷಗಟ್ಟಲೆ ಶ್ರಮವಹಿಸಿ, ಓದಿದ ವಿದ್ಯಾರ್ಥಿಗಳ ಬುದಕು ಬೀದಿಗೆ ಬಂತು. ಅವರ ಭವಿಷ್ಯದ ಜತೆಗೆ ಚೆಲ್ಲಾಟ ನಡೆಸಲಾಯಿತು. ಇದು ಅತ್ಯಂತ ಖಂಡನೀಯ. ಹಾಗಾಗಿಯೇ ರಾಜ್ಯದಲ್ಲಿ ನೀಟ್ ಬ್ಯಾನ್ ಆಗಬೇಕೆನ್ನವುದು ರಾಜ್ಯ ಸರ್ಕಾರದ ನಿಲುವು ಆಗಿದೆ” ಎಂದು ಸ್ಪಷ್ಟ ಪಡಿಸಿದರು. “ಈ ಬಗ್ಗೆ ಮೊದಲು ಮುಖ್ಯಮಂತ್ರಿಗಳ ಜತೆಗೆ ಚರ್ಚೆ ನಡೆಸಬೇಕಿದೆ. ಅವರು ಕೂಡ ನೀಟ್ ರದ್ದಾಗಬೇಕೆನ್ನುವುದನ್ನು ಹೇಳಿದ್ದಾರೆ. ಅದು ನಮ್ಮ ಪಕ್ಷ ನಿಲುವು ಕೂಡ ಆಗಿದೆ. ಆದರೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಳ್ಳುವುದರ ಬಗ್ಗೆ ಮೊದಲು ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಉಳಿದಂತೆ ರಾಜ್ಯದಲ್ಲಿ ನೀಟ್ ಬ್ಯಾನ್ ಆಗಬೇಕೆನ್ನುವ ನಿಲುವಿಗೆ ಸರ್ಕಾರ ಬದ್ಧ” ಎಂದು ಪುನರುಚ್ಚರಿಸಿದರು.
” ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದಾಗ ಇಂಥ ಯಾವುದೇ ಪ್ರಮಾದ ನಡೆದಿಲ್ಲ. ಸಿಇಟಿ ಪರೀಕ್ಷಾ ಮಾದರಿಯು ಇಡೀ ದೇಶಕ್ಕೆ ಮಾದರಿಯಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಸೇರಿ ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ನಿಲುವು ಸಿಇಟಿ ಪರೀಕ್ಷಾ ಮಾದರಿಯೇ ಇರಲಿ ಎನ್ನುವುದನ್ನು ನಾವು ಹೇಳಲಿದ್ದೇವೆʼ ಎಂದು ಸಚಿವರು ತಿಳಿಸಿದರು.
ಬೈಟ್ : ಮಧುಬಂಗಾರಪ್ಪ, ಶಿಕ್ಷಣ ಸಚಿವರು

