ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಹಾಗೂ ಸುತ್ತಮುತ್ತಲಿನ ಭಾಗಗಳ ದಶಕದ ಕನಸಾಗಿದ್ದ ಬೂದಿಗೆರೆ ಏತ ನೀರಾವರಿ ಯೋಜನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಂಠಕವಾಗಿ ಪರಿಣಮಿಸಿದೆ! ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದರೂ, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಮೆಸ್ಕಾಂ ಇಲಾಖೆ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತರು ಶಿವಮೊಗ್ಗದ ಮೆಸ್ಕಾಂ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ರೈತರ ಆಶೋತ್ತರವಾಗಿದ್ದ ಬೂದಿಗೆರೆ ಏತ ನೀರಾವರಿ ಯೋಜನೆ ಜಾರಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ. 2017ರಲ್ಲೇ ಪ್ರಾರಂಭಗೊಂಡು ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಬೋಸರಾಜ್ ಅವರ ಮೂಲಕ 4 ಕೋಟಿ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ, ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದರೂ, ಮೆಸ್ಕಾಂ ಇಲಾಖೆ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಮೆಸ್ಕಾಂ ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್ ಅಳವಡಿಸುವ ಅಂದಾಜು ಪಟ್ಟಿಯಲ್ಲಿ VCB ಸೇರಿಸದೇ ಎಡವಟ್ಟು ಮಾಡಿದ್ದಾರೆ. ಈಗ ತಮ್ಮ ತಪ್ಪನ್ನು ಮುಚ್ಚಿಡಲು ಕಂಟ್ರಾಕ್ಟರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾ, ಲಂಚಕ್ಕಾಗಿ ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬುದು ರೈತರ ಗಂಭೀರ ಆರೋಪ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ತಮ್ಮ ಎಸ್ಟಿಮೇಟ್ ನಲ್ಲೇ ತಪ್ಪು ಮಾಡಿ, ಲಂಚಕ್ಕಾಗಿ ನೆಪ ಹೇಳುತ್ತಾ ವಿಳಂಬ ಮಾಡುತ್ತಿದ್ದಾರೆ. 15 ದಿನಗಳಿಂದ ರೈತರು, ಕಂಟ್ರಾಕ್ಟರ್ ಹಾಗೂ ಇಂಜಿನಿಯರ್‌ಗಳು ಅಲೆದಾಡುತ್ತಿದ್ದರೂ ಕೆಲಸ ಮಾಡುತ್ತಿಲ್ಲ. ತಕ್ಷಣವೇ ವಿದ್ಯುತ್ ಸಂಪರ್ಕ ನೀಡದಿದ್ದರೆ ರೈತರು ಇಲ್ಲೇ ವಿಷ ಕುಡಿದು ಸಾಯಬೇಕಾಗುತ್ತದೆ. ನಮಗೆ ಬರೀ ಭರವಸೆ ಬೇಡ, ಈಗಲೇ ಕರೆಂಟ್ ಕೊಡಬೇಕು ಎಂದು ರೈತರು ಆಗ್ರಹಿಸಿದರು.
ಇನ್ನು ಈ ಬಗ್ಗೆ ಮಾತನಾಡಿದ ಮೆಸ್ಕಾಂ ಇಇ ಇಂದೂಧರ್,
ಮೆಸ್ಕಾಂ ಇಲಾಖೆಯಿಂದ ಮೈನರ್ ಇರಿಗೇಷನ್ ಯೋಜನೆಗೆ ಸುರಕ್ಷತಾ ನಿಯಮಗಳನ್ವಯ ತಾತ್ಕಾಲಿಕ ವಿದ್ಯುತ್ ಚಾರ್ಜಿಂಗ್‌ಗೆ ಅನುಮತಿ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯು 45 ದಿನಗಳ ಒಳಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸುವುದಾಗಿ ಒಪ್ಪಂದ ಮಾಡಿಕೊಂಡಿದೆ. ವಿದ್ಯುತ್ ಪರಿವೀಕ್ಷಕರ ಸಮ್ಮತಿಯೊಂದಿಗೆ, ರೈತರ ಹಿತದೃಷ್ಟಿಯಿಂದ ಈ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ. ಪ್ರೀ-ಕಮಿಷನಿಂಗ್ ಟೆಸ್ಟ್ ಪೂರ್ಣಗೊಳಿಸಿ, ಇಂದಿನಿಂದಲೇ ಯೋಜನೆಗೆ ವಿದ್ಯುತ್ ಚಾಲನೆ ನೀಡಿ ನೀರು ಪೂರೈಸಲಾಗುತ್ತಿದೆ ಎಂದರು.
ಒಟ್ಟಾರೆ, ಸಮಯಕ್ಕೆ ಸರಿಯಾಗಿ ಕೆರೆಗಳಿಗೆ ನೀರು ಹರಿಯದೆ ಬೆಳೆಗಳು ಒಣಗುವ ಭೀತಿ ಎದುರಾಗಿದ್ದು, ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಮೆಸ್ಕಾಂ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

